ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪವಾರ್ ಟೀಕಿಸಿದ್ದಕ್ಕೆ ಕಾಂಗ್ರೆಸ್ ವಕ್ತಾರ ಹುದ್ದೆಯಿಂದ ಕಿತ್ತೊಗೆದರು!
(Congress | Satyavrat Chaturvedi | Congress spokesperson | Sharad Pawar)
ಪವಾರ್ ಟೀಕಿಸಿದ್ದಕ್ಕೆ ಕಾಂಗ್ರೆಸ್ ವಕ್ತಾರ ಹುದ್ದೆಯಿಂದ ಕಿತ್ತೊಗೆದರು!
ನವದೆಹಲಿ, ಬುಧವಾರ, 17 ಮಾರ್ಚ್ 2010( 10:23 IST )
ಬೆಲೆಯೇರಿಕೆ ಕುರಿತು ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಸಂಸದ ಸತ್ಯವೃತ ಚತುರ್ವೇದಿಯವರನ್ನು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಪಕ್ಷದ ವಕ್ತಾರ ಹುದ್ದೆಯಿಂದ ರಾತೋರಾತ್ರಿ ಕಿತ್ತು ಹಾಕಲಾಗಿದೆ.
ಟಿವಿ ವಾಹಿನಿಯೊಂದರ ಸಂದರ್ಶನವೊಂದರಲ್ಲಿ ಪವಾರ್ ವಿರುದ್ಧ ಕಿಡಿ ಕಾರಿದ್ದ ಚತುರ್ವೇದಿಯವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎನ್‌ಸಿಪಿ ಕಾಂಗ್ರೆಸ್ ಮೇಲೆ ತೀವ್ರ ಒತ್ತಡ ಹೇರಿತ್ತು ಎಂದು ಮೂಲಗಳು ಹೇಳಿವೆ.
ಹೆಚ್ಚಿನ ವಿವರಣೆಗಳನ್ನು ನೀಡಲು ನಿರಾಕರಿಸಿರುವ ಎಐಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಜನಾರ್ದನ ದ್ವಿವೇದಿ, ಚತುರ್ವೇದಿಯವರನ್ನು ಪಕ್ಷದ ವಕ್ತಾರ ಸ್ಥಾನದಿಂದ ಹಿಂದಕ್ಕೆ ಪಡೆಯಲಾಗಿದೆ ಎಂದಷ್ಟೇ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಟಿವಿಯೊಂದರ ಜತೆ ಮಾತನಾಡಿದ್ದ ಚತುರ್ವೇದಿಯವರು, ಪವಾರ್ ವಿರುದ್ಧ ತೀರಾ ಕೀಳು ಭಾಷೆಯಲ್ಲಿ ಟೀಕಿಸಿದ್ದರು ಎಂದು ಹೇಳಲಾಗಿದ್ದು, ಇದು ಮಿತ್ರಪಕ್ಷ ಎನ್‌ಸಿಪಿ ತೀವ್ರ ಮುಖಭಂಗಕ್ಕೆ ಕಾರಣವಾಗಿತ್ತು.
ಎನ್‌ಸಿಪಿ ಮುಖಂಡ ಹಾಗೂ ಸಚಿವ ಶರದ್ ಪವಾರ್ ಅವರಿಗೆ ದೇಶದಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಣಕ್ಕೆ ತರುವುದು ಸಾಧ್ಯವಾಗಿಲ್ಲ. ಅವರಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಚತುರ್ವೇದಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಅಂದ ಹಾಗೆ ಚತುರ್ವೇದಿಯವರು ವಿವಾದಿತ ಹೇಳಿಕೆಯಿಂದ ಸಮಸ್ಯೆಯನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸಮಾಜವಾದಿ ಪಕ್ಷದ ಜತೆ ಅನಿವಾರ್ಯ ಸಂಬಂಧ ಬೆಳೆಸಿದ್ದ ಯುಪಿಎ ಆಡಳಿತಾವಧಿಯಲ್ಲೂ ಇದೇ ರೀತಿಯ ಪ್ರಸಂಗ ನಡೆದಿತ್ತು. ಆಗ ಸಮಾಜವಾದಿ ಮುಖಂಡರಾಗಿದ್ದ ಅಮರ್ ಸಿಂಗ್ ವಿರುದ್ಧ ಚತುರ್ವೇದಿ ಕಟುವಾಗಿ ಟೀಕಿಸಿದ್ದರು.
ಮಧ್ಯಪ್ರದೇಶದವರಾದ ಚತುರ್ವೇದಿ ರಾಜ್ಯಸಭಾ ಸದಸ್ಯರಾಗಿದ್ದು, ವಕ್ತಾರ ಹುದ್ದೆಯನ್ನು ಹೊರತುಪಡಿಸಿ ಕಾಂಗ್ರೆಸ್ಸಿನ ಇತರ ಪ್ರಮುಖ ಹುದ್ದೆಗಳಲ್ಲಿ ಅವರು ಮುಂದುವರಿಯಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.