ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಯಾವತಿ ನೋಟಿನ ಹಾರದಲ್ಲಿ 22 ಕೋಟಿ ರೂಪಾಯಿ! (Mayawati | BSP | Garland row | Congress)
Bookmark and Share Feedback Print
 
ತಾನು ಬಡವರ ಮತ್ತು ದಲಿತರ ದನಿ ಎಂದು ಹೇಳಿಕೊಂಡು ಬರುತ್ತಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಕೋಟಿ-ಕೋಟಿ ರೂಪಾಯಿಗಳ ಹಾರಾರ್ಪಣೆ ಬಳಿಕ ತೀವ್ರ ಟೀಕೆಗೆ ಒಳಗಾಗುತ್ತಿದ್ದು, ಇದೀಗ ಆದಾಯ ತೆರಿಗೆ ಇಲಾಖೆ ಪ್ರಕರಣದ ಕುರಿತು ತನಿಖೆ ನಡೆಸಲು ಮುಂದಾಗಿದೆ. ಬೆನ್ನಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಈ ಹಾರದಲ್ಲಿ ಕನಿಷ್ಠ 22.5 ಕೋಟಿ ರೂಪಾಯಿಗಳಿದ್ದವು ಎಂದು ಆರೋಪಿಸಿದೆ.

ಕೆಂಡಾಮಂಡಲವಾದ ಕಾಂಗ್ರೆಸ್...
ಬಹುಜನ ಸಮಾಜವಾದಿ ಪಕ್ಷದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪಕ್ಷದ ಅಧಿನಾಯಕಿ ಮಾಯಾವತಿ ಕೊರಳಿಗೆ ಹಾಕಿರುವ ಹಾರ ವಿವಾದಕ್ಕೆ ಕಾರಣವಾದ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿದೆ.
PR


ಈ ಸಂಬಂಧ ವಾರ್ತಾವಾಹಿನಿಯೊಂದರ ಜತೆ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಈ ನೋಟಿನ ಮಾಲೆಯಲ್ಲಿ 22.5 ಕೋಟಿ ರೂಪಾಯಿ ಹಣವಿದೆ ಎಂದು ಲೆಕ್ಕ ಹಾಕಿದ್ದಾರೆ.

ಹಾರದ ಪ್ರತೀ ಸುತ್ತಿನಲ್ಲಿ 1,000 ರೂಪಾಯಿಯ 45 ನೋಟುಗಳನ್ನು ಬಳಸಲಾಗಿದೆ. ಅಂದರೆ ಒಂದು ಸುತ್ತಿನಲ್ಲಿ 45,000 ರೂಪಾಯಿ ಹಣವನ್ನು ಪೋಣಿಸಲಾಗಿದೆ. ಇಂತಹ ಪ್ರತೀ ಒಂದು ಸೆಂಟಿ ಮೀಟರ್ ಹಾರದಲ್ಲಿ ಇಂತಹ ಐದು ಸುತ್ತುಗಳ ಅಗತ್ಯವಿರುತ್ತದೆ. ಅಂದರೆ 5 x 45,000= 2,25,000 ರೂಪಾಯಿಗಳಾಗುತ್ತದೆ.

ಮಾಯಾವತಿಯವರಿಗೆ ಹಾಕಲಾಗಿರುವ ಮಾಲೆ ಸುಮಾರು 10 ಮೀಟರ್ ಉದ್ದವಿತ್ತು. ಅಂದರೆ 2.25 ಲಕ್ಷ x 1,000 = 22.5 ಕೋಟಿ ರೂಪಾಯಿಗಳಾಗುತ್ತದೆ ಎಂದು ದಿಗ್ವಿಜಯ್ ಸಿಂಗ್ ವಿವರಣೆ ನೀಡಿದ್ದಾರೆ.

ಇಲ್ಲ.. ಕೇವಲ 21 ಲಕ್ಷ ಮಾತ್ರ...
ಮಾಯಾವತಿಯವರಿಗೆ ಹಾಕಿ ಹಾರದಲ್ಲಿ ಕೋಟಿಗಟ್ಟಲೆ ಹಣವಿರಲಿಲ್ಲ. ಕೇವಲ 21 ಲಕ್ಷ ರೂಪಾಯಿ ಮಾತ್ರ ಇತ್ತು. ಇದನ್ನು ಲಕ್ನೋದ ಬಿಎಸ್‌ಪಿ ಘಟಕ ತಯಾರಿಸಿದೆ. ಇಲ್ಲಿನ ಕಾರ್ಯಕರ್ತರಿಂದ ಮಾತ್ರ ಮಾಲೆಗಾಗಿ ಹಣ ಸಂಗ್ರಹಿಸಲಾಗಿದೆ ಎಂದು ಉತ್ತರ ಪ್ರದೇಶ ಸರಕಾರದ ಸಚಿವ ನಸೀಮುದ್ದೀನ್ ಸಿದ್ಧಿಕಿ ಸ್ಪಷ್ಟನೆ ನೀಡಿದ್ದಾರೆ.

ಸಚಿವರು ಇದು ಲಕ್ನೋದಿಂದ ಅರ್ಪಣೆ ಮಾಡಲ್ಪಟ್ಟಿದೆ ಎಂದು ಪುನರುಚ್ಛರಿಸುತ್ತಿದ್ದರೂ, ಮೂಲಗಳ ಪ್ರಕಾರ ಈ ಮಾಲೆ ಕರ್ನಾಟಕ ಬಿಎಸ್‌ಪಿ ಘಟಕದಿಂದ ನೀಡಲ್ಪಟ್ಟಿದೆ. ಆದರೆ ಕರ್ನಾಟಕ ಘಟಕದ ಸದಸ್ಯರು ಅಥವಾ ಅಧ್ಯಕ್ಷರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಿದ್ದಾರೆ.

ಈ ಮಾಲೆಯನ್ನು ನಾವೇ ನೀಡಿದ್ದು ಎಂದು ಕರ್ನಾಟಕದ ಹೆಸರು ಹೇಳಲಿಚ್ಛಿಸದ ಬಿಎಸ್‌ಪಿ ನಾಯಕರೊಬ್ಬರು ಹೇಳಿಕೊಂಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ಧಿಕಿ, ನಾನು ಹೇಳುತ್ತಿರುವುದೇ ಸತ್ಯ; ಕರ್ನಾಟಕದಿಂದ ಈ ರೀತಿಯ ಹೇಳಿಕೆಯನ್ನು ಯಾರು ನೀಡಿದ್ದಾರೋ ನನಗೆ ಗೊತ್ತಿಲ್ಲ ಎಂದಿದ್ದಾರೆ.

ನಿನ್ನೆ ಲೋಕಸಭೆಯಲ್ಲಿ ಮಾಯಾವತಿ ಹಾರ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಸಮಾಜವಾದಿ, ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಬಹುತೇಕ ಪಕ್ಷಗಳ ಸದಸ್ಯರು ದುಬಾರಿ ಹಾರದ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದವು.

ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯು ಮಾಯಾ ಹಾರ ಪ್ರಕರಣವನ್ನು ತನಿಖೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ