ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಿತೃತ್ವ ಪ್ರಕರಣ; ಹೈಕೋರ್ಟಲ್ಲಿ ಎನ್.ಡಿ. ತಿವಾರಿ ಅರ್ಜಿ ವಜಾ
(N D Tiwari | Andhra Pradesh | N D Tiwari | Rohit Shekhar)
ಪಿತೃತ್ವ ಪ್ರಕರಣ; ಹೈಕೋರ್ಟಲ್ಲಿ ಎನ್.ಡಿ. ತಿವಾರಿ ಅರ್ಜಿ ವಜಾ
ನವದೆಹಲಿ, ಬುಧವಾರ, 17 ಮಾರ್ಚ್ 2010( 12:51 IST )
ರೋಹಿತ್ ಶೇಖರ್ ಎಂಬ ವ್ಯಕ್ತಿ ತಾನು ಆಂಧ್ರಪ್ರದೇಶ ಮಾಜಿ ರಾಜ್ಯಪಾಲ ಎನ್.ಡಿ. ತಿವಾರಿಯವರ ಪುತ್ರ ಎಂದು ಘೋಷಿಸುವಂತೆ ನ್ಯಾಯಾಲಯದಲ್ಲಿ ಹೂಡಿದ್ದ ದಾವೆಯನ್ನು ಪ್ರಶ್ನಿಸಿ ತಿವಾರಿಯವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾ ಮಾಡಿದೆ.
ನ್ಯಾಯಮೂರ್ತಿಗಳಾದ ವಿಕ್ರಂಜಿತ್ ಸೇನ್ ಮತ್ತು ಮನಮೋಹನ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು ತಿವಾರಿಯವರ ಅರ್ಜಿಯನ್ನು ತಳ್ಳಿ ಹಾಕಿದ್ದು, ಪ್ರಕರಣವು ಈ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ರುಜುವಾತುಪಡಿಸಲು ಸಾಕಷ್ಟು ಪುರಾವೆಗಳಿವೆ ಎಂದಿದೆ. ನ್ಯಾಯಾಲಯದ ಈ ತೀರ್ಪಿನಿಂದಾಗಿ 34ರ ಹರೆಯದ ಶೇಖರ್ ನಿಟ್ಟುಸಿರು ಬಿಡುವಂತಾಗಿದೆ.
ತಿವಾರಿಯವರು ತನ್ನ ಮಗನೆಂದು ಶೇಖರ್ ಅವರನ್ನು ಒಪ್ಪಿಕೊಳ್ಳಲು ನಿರಾಕರಿಸಿರುವುದೇ ಈ ದಾವೆ ಹೂಡಲು ಕಾರಣವಾಗಿತ್ತು ಎಂದು ಶೇಖರ್ ಅವರ ಪರ ವಕೀಲರಾಗಿರುವ ಪಿ.ಎಸ್. ಪಟ್ವಾಲಿ ತಿಳಿಸಿದ್ದಾರೆ.
ನನ್ನ ಜೈವಿಕ ತಂದೆ ತಿವಾರಿ ಎಂದು ನ್ಯಾಯಾಲಯ ಘೋಷಿಸಬೇಕೆಂದು ಶೇಖರ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಏಕಸದಸ್ಯ ಪೀಠವು ಈ ಹಿಂದೆ ಅವರ ಮನವಿಯನ್ನು ಪ್ರಕರಣ ಕಾಲಮಿತಿಯೊಳಗಿಲ್ಲ ಎಂಬ ಕಾರಣ ಮುಂದೊಡ್ಡಿ ನಿರಾಕರಿಸಿತ್ತು. ನಂತರ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತಿವಾರಿಯವರಿಗೆ ನೊಟೀಸ್ ಜಾರಿ ಮಾಡಲಾಗಿತ್ತು. ಆದರೆ ತಿವಾರಿಯವರು ಇದರ ವಿರುದ್ಧ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು.
ತಿವಾರಿ ಮತ್ತು ನನ್ನ ತಾಯಿ ಉಜ್ವಲಾ ಶರ್ಮಾ ಅವರ ಅಕ್ರಮ ಸಂಬಂಧದಿಂದ ನಾನು ಹುಟ್ಟಿದ್ದು, ಇದನ್ನು ಅಧಿಕೃತವಾಗಿ ಘೋಷಿಸಬೇಕೆಂದು ಕಾನೂನು ಪದವೀಧರರಾಗಿರುವ ಶೇಖರ್ ನ್ಯಾಯಾಲಯದ ಮೊರೆ ಹೋಗಿದ್ದರು.
ಮೂವರು ಯುವತಿಯರೊಂದಿಗೆ ರಾಜಭವನದಲ್ಲಿ 86ರ ತಿವಾರಿ ರಾಸಲೀಲೆ ನಡೆಸಿದ್ದಾರೆ ಎಂದು ಹೇಳಲಾಗಿರುವ ವೀಡಿಯೋ ಒಂದನ್ನು ಆಂಧ್ರಪ್ರದೇಶದ ಎಬಿನ್ ಆಂಧ್ರಜ್ಯೋತಿ ಎಂಬ ಟೀವಿ ಚಾನೆಲ್ ಪ್ರಸಾರ ಮಾಡಿದ ಬೆನ್ನಿಗೆ ಅವರು ತೀವ್ರ ಟೀಕೆಗೊಳಗಾಗಿ ಆರೋಗ್ಯ ಸಮಸ್ಯೆ ಕಾರಣಗಳನ್ನು ಮುಂದೊಡ್ಡಿ ಆಂಧ್ರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದರು.