ಬಿಎಸ್‌ಪಿ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಬಹುಕೋಟಿ ಮೌಲ್ಯದ ನೋಟಿನ ಮಾಲೆಯನ್ನು ಸ್ವೀಕರಿಸಿದ್ದಕ್ಕೆ ಬಂದಿರುವ ಟೀಕೆಗಳನ್ನು ಗಣನೆಗೆ ತೆಗೆದುಕೊಳ್ಳದ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಬುಧವಾರ ಮತ್ತೊಂದು ನೋಟಿನ ಮಾಲೆಯನ್ನು ಹಾಕಿಸಿಕೊಂಡು ಎದುರಾಳಿಗಳಿಗೆ ಸಡ್ಡು ಹೊಡೆದಿದ್ದಾರೆ.
ಸೋಮವಾರ ಲಕ್ನೋದಲ್ಲಿ ನಡೆದಿದ್ದ ಪಕ್ಷದ ಸಮಾವೇಶದಲ್ಲಿ ಮಾಯಾವತಿಯವರಿಗೆ ಹಾಕಲಾಗಿದ್ದ ಸಾವಿರ ರೂಪಾಯಿ ನೋಟುಗಳ ಬೃಹತ್ ಮಾಲೆಯ ಬಗ್ಗೆ ವಿರೋಧ ಪಕ್ಷಗಳು ತೀವ್ರ ತಕರಾರು ಎತ್ತುತ್ತಿರುವ ಹೊರತಾಗಿಯೂ ತಾವು ದಿಕ್ಕೆಟ್ಟಿಲ್ಲ ಎಂಬ ಹೇಳಿಕೆ ನೀಡಿರುವ ಬಿಎಸ್‌ಪಿ ಮುಖಂಡರು ಒಟ್ಟು ಸೇರಿ ಬುಧವಾರ ನಡೆದ ಪಕ್ಷದ ಸಭೆಯಲ್ಲಿ 18 ಲಕ್ಷ ರೂಪಾಯಿ ಮೊತ್ತದ ಮತ್ತೊಂದು ನೋಟಿನ ಮಾಲೆಯನ್ನು ಹಾಕಿದ್ದಾರೆ.
ಸೋಮವಾರ ಮಾಯಾವತಿಯವರ ಕೊರಳಿಗೆ ಬಿದ್ದಿದ್ದ ಮಾಲೆಯಲ್ಲಿ 21 ಲಕ್ಷ ರೂಪಾಯಿಗಳಿಂದ 15 ಕೋಟಿ ರೂಪಾಯಿ ಮೌಲ್ಯದ ನೋಟುಗಳಿದ್ದವು ಎಂದು ಹೇಳಲಾಗುತ್ತಿದೆ. ಅತ್ತ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರಂತೂ, ಈ ಹಾರದಲ್ಲಿ 22.5 ಕೋಟಿ ರೂಪಾಯಿಗಳಿವೆ ಎಂದು ಲೆಕ್ಕ ಹಾಕಿದ್ದಾರೆ.
ಸಭೆಯ ನಂತರ ಮಾತನಾಡಿರುವ ಉತ್ತರ ಪ್ರದೇಶ ಲೋಕೋಪಯೋಗಿ ಸಚಿವ ನಸೀಮುದ್ದೀನ್ ಸಿದ್ಧಿಕಿ, 'ಇನ್ನು ಮುಂದೆ ಮಾಯಾವತಿಯವರು ಎಲ್ಲೆಲ್ಲಾ ಹೋಗುತ್ತಾರೋ, ಅಲ್ಲೆಲ್ಲ ನಾವು ನೋಟುಗಳಿಂದ ತಯಾರಿಸಿದ ಮಾಲೆಯನ್ನೇ ಅರ್ಪಿಸುತ್ತೇವೆ' ಎಂದು ವಿರೋಧಿಗಳಿಗೆ ಸಡ್ಡು ಹೊಡೆದಿದ್ದಾರೆ.
ನಾವು ಇವತ್ತು ಪಕ್ಷದ ವರಿಷ್ಠೆಗೆ 18 ಲಕ್ಷ ರೂಪಾಯಿ ಮೊತ್ತದ ಮತ್ತೊಂದು ನೋಟಿನ ಮಾಲೆಯನ್ನು ಅರ್ಪಿಸಿದ್ದೇವೆ. ರಾಜ್ಯದಲ್ಲಿನ ಪಕ್ಷದ 18 ಘಟಕಗಳಿಂದ ಇದಕ್ಕಾಗಿ ಹಣ ಸಂಗ್ರಹಿಸಿದ್ದೇವೆ ಎಂದು ಬಿಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಿದ್ಧಿಕಿ ತಿಳಿಸಿದ್ದಾರೆ.
ಮುಂದೆ ಎಲ್ಲೇ ಪಕ್ಷದ ಕಾರ್ಯಕ್ರಮಕ್ಕೆ ನಮ್ಮ ನಾಯಕಿ ಹಾಜರಾದರೂ, ಅಲ್ಲಿ ಅವರಿಗೆ ಭಾರತದ ನೋಟುಗಳಿಂದಲೇ ಸ್ವಾಗತಿಸಲಾಗುತ್ತದೆ. ಆದರೆ ಈ ಕುರಿತು ಅವರು ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದು ವಿವರಣೆ ನೀಡಿದರು.
ವಿರೋಧ ಪಕ್ಷಗಳಿಗೆ ಬೇರೆ ಯಾವುದೇ ವಿಷಯವನ್ನು ವಿವಾದ ಮಾಡಲು ಸಾಧ್ಯವಾಗದೇ ಇದ್ದಾಗ ಹಾರ ವಿಚಾರವನ್ನು ವಿವಾದವನ್ನಾಗಿಸಿವೆ. ಪ್ರತಿಪಕ್ಷಗಳ ಈ ನೀಚ ಯತ್ನಕ್ಕೆ ತಿರುಗೇಟು ನೀಡಲು ಪಕ್ಷದ ಕಾರ್ಯಕರ್ತರು ನಿರ್ಧರಿಸಿದ ಹಿನ್ನೆಲೆಯಲ್ಲಿ ಇಂದು ಮತ್ತೊಂದು ಮಾಲೆಯನ್ನು ಅರ್ಪಿಸಲಾಗಿದೆ ಎಂದರು.