ತನಗೆ ಚಿತ್ರಹಿಂಸೆ ನೀಡಿ ತಪ್ಪೊಪ್ಪಿಗೆ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ ಎಂಬ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಬದುಕುಳಿದು ಸೆರೆ ಸಿಕ್ಕ ಏಕೈಕ ಉಗ್ರ ಪಾಕಿಸ್ತಾನ ಮೂಲದ ಅಜ್ಮಲ್ ಕಸಬ್ ಹೇಳಿಕೆ ಸಂಪೂರ್ಣ ಸುಳ್ಳು ಮತ್ತು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಆತ ಹೂಡಿರುವ ತಂತ್ರ ಎಂದು ಪ್ರಾಸಿಕ್ಯೂಷನ್ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.
ಕಸಬ್ ಲಷ್ಕರ್ ಇ ತೋಯ್ಬಾದ ಕಾರ್ಯಕರ್ತನಾಗಿದ್ದು, ನ್ಯಾಯಾಲಯವನ್ನು ತಪ್ಪು ಹಾದಿಗೆಳೆಯುವ ಸಮರ್ಥ ತರಬೇತಿಯನ್ನು ಆತ ಪಡೆದುಕೊಂಡಿದ್ದಾನೆ ಎಂದು ಮುಂಬೈ ದಾಳಿ ಪ್ರಕರಣದ ಅಂತಿಮ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎಂ.ಎಲ್. ತಹಲಿಯಾನಿ ಅವರಿಗೆ ಸರಕಾರಿ ವಕೀಲ ಉಜ್ವಲ್ ನಿಕ್ಕಂ ತಿಳಿಸಿದ್ದಾರೆ.
ತನಗೆ ಪೊಲೀಸರು ದೈಹಿಕ ಕಿರುಕುಳ ನೀಡಿ ತಪ್ಪೊಪ್ಪಿಗೆ ಪಡೆದುಕೊಂಡಿದ್ದಾರೆಯೇ ಹೊರತು, ಅದು ತನ್ನ ಪ್ರಾಮಾಣಿಕ ಹೇಳಿಕೆಯಾಗಿರಲಿಲ್ಲ. ಅಲ್ಲದೆ ಕಳೆದ ವರ್ಷದ ಫೆಬ್ರವರಿ ದಾಖಲು ಮಾಡಿಕೊಂಡಿದ್ದ ತಪ್ಪೊಪ್ಪಿಗೆ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಸಾವಂತ್ ವಾಗಲೆಯವರು ನನ್ನ ಎದುರು ಓದಿ ಹೇಳಿರಲಿಲ್ಲ ಎಂದು ಕಸಬ್ ನ್ಯಾಯಾಲಯದಲ್ಲಿ ಆರೋಪಿಸಿದ್ದಕ್ಕೆ ಪ್ರತಿಯಾಗಿ ನಿಕ್ಕಂ ವಿವರಣೆ ನೀಡುತ್ತಿದ್ದರು.
ಕಸಬ್ ತಪ್ಪೊಪ್ಪಿಗೆಯನ್ನು ನೀಡಿದ ಸುದೀರ್ಘ ಸಮಯಗಳ ಬಳಿಕ ಆತನ ವಕೀಲರನ್ನು ಸಂಪರ್ಕಿಸಿ ನಂತರವಷ್ಟೇ (ಏಪ್ರಿಲ್ 17ರಂದು) ತನ್ನ ತಪ್ಪೊಪ್ಪಿಗೆ ನಿರಾಕರಣೆ ಮಾಡಿದ್ದ. ತಪ್ಪೊಪ್ಪಿಗೆಯನ್ನು ತಳ್ಳಿ ಹಾಕಿರುವುದು ಪೂರ್ವ ನಿಯೋಜಿತ ಮತ್ತು ಸಾಕಷ್ಟು ಯೋಚನೆ ಮಾಡಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಕಾನೂನಿನ ದೃಷ್ಟಿಯಲ್ಲಿ ಇಂತಹ ವಿಳಂಬಗಳಿಗೆ ಮೌಲ್ಯವಿಲ್ಲ ಎಂದು ಆರನೇ ದಿನ ವಾದ ಮಂಡಿಸುತ್ತಿದ್ದ ನಿಕ್ಕಂ ತಿಳಿಸಿದ್ದಾರೆ.
ಅಲ್ಲದೆ ಬಲವಂತವಾಗಿ ಕಸಬ್‌ನ ಸಹಿಯನ್ನು ಪಡೆದುಕೊಳ್ಳಲಾಗಿದೆ ಎಂಬ ಆರೋಪವನ್ನು ಮ್ಯಾಜಿಸ್ಟ್ರೇಟ್ ಮೇಲೆ ಹೊರಿಸಲಾಗಿದ್ದರೂ, ಅವರನ್ನು ಕಸಬ್ ವಕೀಲ ಅಥವಾ ಕಸಬ್ ಪ್ರಶ್ನಿಸಲು ಮುಂದಾಗಿಲ್ಲ ಎಂಬುದನ್ನೂ ಪ್ರಾಸಿಕ್ಯೂಟರ್ ನ್ಯಾಯಾಲಯದ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಕಸಬ್ ನ್ಯಾಯಾಧೀಶರ ಎದುರು ಮುಖ ಮುಚ್ಚಿಕೊಂಡು ವಕೀಲರ ವಾದವನ್ನು ಆಲಿಸುತ್ತಿದ್ದ.