ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಜಿ ಪ್ರೇಯಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಶಾಸಕ!
(SP MLA | Samajwadi Party | Sripath Azad Dhobi | Savitri Devi)
ತನ್ನ ಸೇವೆ ಮಾಡುತ್ತಿದ್ದ ಮಾಜಿ ಪ್ರೇಯಸಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಮಾನವೀಯ ಘಟನೆಯೊಂದು ವರದಿಯಾಗಿದ್ದು, ಘಟನೆಯ ಕರ್ತೃ ಸಮಾಜವಾದಿ ಶಾಸಕ ನೇಪಾಳಕ್ಕೆ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.
ಉತ್ತರ ಪ್ರದೇಶದ ಮಹರಗಂಜ್ ಜಿಲ್ಲೆಯ ಸಾದರ್ ಕ್ಷೇತ್ರದ ಶಾಸಕ ಶ್ರೀಪಾಠ್ ಆಜಾದ್ ದೋಬಿ ಎಂಬಾತನೇ ಈ ದುರುಳ ಶಾಸಕ. ಮಹಿಳೆಯ ಅಪ್ರಾಪ್ತ ಪುತ್ರ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಘಟನೆಯಿಂದ ತೀವ್ರ ಸುಟ್ಟ ಗಾಯಕ್ಕೊಳಗಾದ ಮಹಿಳೆ ಸಾವಿತ್ರಿ ದೇವಿಯನ್ನು ಗೋರಖಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿದ್ದು, ಆಕೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ವರದಿಗಳು ಹೇಳಿವೆ.
ಘಟನೆ ವಿವರ... ಮಾರ್ಚ್ 14ರಂದು ಸೋಮವಾರ ರಾತ್ರಿ ಸಾವಿತ್ರಿ ದೇವಿ ಶಾಸಕನ ಮನೆಯಲ್ಲಿ ಆತನಿಗೆ ಊಟ ನೀಡುತ್ತಿದ್ದಳು. ಈ ಸಂದರ್ಭದಲ್ಲಿ ಕೋಪಗೊಂಡ ಶಾಸಕ ಊಟದ ತಟ್ಟೆಯನ್ನು ಎಸೆದಿದ್ದ.
ಇಷ್ಟಕ್ಕೇ ತೃಪ್ತನಾಗದ ಆತ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ. ನಂತರ ಭೀತನಾದ ಆತ ಕಿಟಕಿಯ ಮೂಲಕ ಪರಾರಿಯಾಗಿದ್ದಾನೆ ಎಂದು ಬಲಿಪಶುವಿನ ಮಗ ಮಹೇಶ್ ಕುಮಾರ್ ತಿಳಿಸಿದ್ದಾನೆ.
ಈ ಮಹಿಳೆ ಮತ್ತು ಶಾಸಕ ಆಜಾದ್ ನಡುವೆ ಅಕ್ರಮ ಸಂಬಂಧ ಇತ್ತೆಂದು ಹೇಳಲಾಗಿದ್ದು, ಇದೇ ಸಂಬಂಧ ಇಬ್ಬರ ನಡುವೆ ಭಾರೀ ವಾಗ್ವಾದ ನಡೆದಿತ್ತು. ಇದರ ಪರಿಣಾಮ ಬೆಂಕಿ ಹಚ್ಚುವುದರಲ್ಲಿ ಅಂತ್ಯಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಶಾಸಕ ನೇಪಾಳಕ್ಕೆ ಪರಾರಿಯಾಗಿದ್ದಾನೆಂದು ಶಂಕಿಸಲಾಗಿದೆ. ನೇಪಾಳದ ದುದ್ವಾಲ್ ಜಿಲ್ಲೆಯಲ್ಲಿ ಆತ ತಂಗಿರಬಹುದು. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಗೋರಖಪುರ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.