ದಲಿತರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಾ ಬಂದ ಬಿಎಸ್‌ಪಿ ಅಧಿನಾಯಕಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ನೋಟಿನ ಹಾರ ವಿವಾದದಲ್ಲಿ ಮುಳುಗೇಳುತ್ತಿದ್ದಂತೆಯೇ ಅವರ ಪಕ್ಷ ಕಳೆದ ಮೂರು ವರ್ಷಗಳಲ್ಲಿ 30 ಪಟ್ಟು ಹೆಚ್ಚು ನಗದು ಹಣವನ್ನು ಗಳಿಸಿರುವ ಅಚ್ಚರಿಯ ಮಾಹಿತಿ ಹೊರ ಬಿದ್ದಿದೆ.
'ಸಿಎನ್ಎನ್-ಐಬಿಎನ್' ವಾರ್ತಾವಾಹಿನಿ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಈ ಮಾಹಿತಿಯನ್ನು ಪಡೆದುಕೊಂಡಿದ್ದು, ಇದರಲ್ಲಿ ಮಾಯಾವತಿಯವರ ಬಿಎಸ್‌ಪಿ ಪಕ್ಷದ ಸಂಪತ್ತು ಕೇವಲ ಮೂರೇ ವರ್ಷದಲ್ಲಿ ಮೂವತ್ತು ಪಟ್ಟು ಹೆಚ್ಚಿರುವುದನ್ನು ಅಧಿಕೃತವಾಗಿ ತಿಳಿಸಲಾಗಿದೆ.
ಬಿಎಸ್‌ಪಿ ಸಲ್ಲಿಸಿರುವ ಆದಾಯ ತೆರಿಗೆಯ ಪ್ರತಿಗಳನ್ನು ಗಮನಿಸಿದಾಗ 2006ರಲ್ಲಿ ಕೇವಲ 70,83,120 ರೂಪಾಯಿ ನಗದು ಹಣವನ್ನು ತೋರಿಸಿದ್ದ ಪಕ್ಷವು, 2009ರಲ್ಲಿ 21,99,89,156 ರೂಪಾಯಿಗಳನ್ನು ತೋರಿಸಿದೆ. ಅಂದರೆ ಆದಾಯದಲ್ಲಿ ಸುಮಾರು 30 ಪಟ್ಟುಗಳಷ್ಟು ಹೆಚ್ಚಳ ಕಂಡು ಬಂದಿದೆ.
2004ರಲ್ಲಿ 4,18,28,969 ರೂಪಾಯಿ ನಗದು ಹಣ ಹೊಂದಿದ್ದ ಬಹುಜನ ಸಮಾಜವಾದಿ ಪಕ್ಷವು 2005ರಲ್ಲಿ 1,61,83,946 ರೂಪಾಯಿ ಇರುವುದಾಗಿ ಆದಾಯ ತೆರಿಗೆ ಇಲಾಖೆಗೆ ರಿಟರ್ನ್ ಫೈಲ್ ಸಲ್ಲಿಸಿತ್ತು.
2009ರ ಮಾರ್ಚ್ 2ರಂದು ಚುನಾವಣಾ ಆಯೋಗವು ಬಿಎಸ್‌ಪಿ ಒಟ್ಟು ಆಸ್ತಿ 188.18 ಕೋಟಿ ರೂಪಾಯಿ ಎಂದು ಘೋಷಿಸಿತ್ತು. ಆ ಮೂಲಕ ದೇಶದ ಶ್ರೀಮಂತ ಪಕ್ಷಗಳಲ್ಲೊಂದು ಎಂಬುದು ರುಜುವಾತಾಗಿತ್ತು.
ಇಲ್ಲಿ ಅಚ್ಚರಿಯ ವಿಚಾರವೆಂದರೆ ಚುನಾವಣೆ ಸಂದರ್ಭದಲ್ಲೂ ಪಕ್ಷ ಲಾಭ ಗಳಿಸಿರುವುದು. ಸಾಮಾನ್ಯವಾಗಿ ಚುನಾವಣೆ ಮುಕ್ತಾಯವಾಗುವಾಗ ಯಾವುದೇ ಪಕ್ಷದ ಖಜಾನೆ ಬಹುತೇಕ ಖಾಲಿಯಾಗಿರುತ್ತದೆ. ಆದರೆ 2009ರ ಚುನಾವಣೆಯ ನಂತರ ಬಿಎಸ್‌ಪಿ 12 ಕೋಟಿ ರೂಪಾಯಿಗಳನ್ನು ತನ್ನ ಖಾತೆಗೆ ಸೇರಿಸಿತ್ತು!
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯ ಪ್ರಕಾರ ಪಕ್ಷವು ತಿಂಗಳ ಕಾಲ ನಡೆದ ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ 33.16 ಕೋಟಿ ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ಪಡೆದಿತ್ತು. ಆದರೆ 21.23 ಕೋಟಿ ರೂಪಾಯಿಗಳನ್ನು ಮಾತ್ರ ಚುನಾವಣೆಗಾಗಿ ಖರ್ಚು ಮಾಡಲಾಗಿದೆ. ಹಾಗಾಗಿ 11.93 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಬಿಎಸ್‌ಪಿ ತಿಳಿಸಿತ್ತು.
ಕಳೆದ ಮೂರು ವರ್ಷಗಳಲ್ಲಿ ಆರು ಕೋಟಿ, ಮೂರು ಕೋಟಿ, ಒಂಬತ್ತು ಕೋಟಿ ಹೀಗೆ ಒಟ್ಟಾರೆ ಪಕ್ಷವು 45,05,00,000 ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ಪಡೆದುಕೊಂಡಿದೆ.