ನೆರೆ ಮನೆಯಲ್ಲಿನ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳಕ್ಕೆ ಮುಂದಾದ 65ರ ವ್ಯಕ್ತಿಯೊಬ್ಬ 16ರ ಹರೆಯದ ಹುಡುಗಿಯನ್ನು ಗುಂಡಿಕ್ಕಿ ಕೊಂದು ಹಾಕಿದ್ದು, ಪೊಲೀಸರ ಮೇಲೂ ಗುಂಡು ಹಾರಿಸಿದ್ದಾನೆ. ಆದರೆ ಪೊಲೀಸರ ಪ್ರತಿದಾಳಿಯಲ್ಲಿ ಆರೋಪಿ ಹತನಾಗಿದ್ದಾನೆ.
ಇದು ನಡೆದಿರುವುದು ಮುಂಬೈಯ ಅಂಧೇರಿಯಲ್ಲಿನ ವಸತಿ ಕಟ್ಟಡವೊಂದರಲ್ಲಿ. ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿರುವ ನಂತರ ಸಾವನ್ನಪ್ಪಿರುವ ವೃದ್ಧ ಹರೀಶ್ ಮರೋಡಿಯಾ ಬಾಲಕಿ ಹಿಮಾನಿ ಮೆಹ್ತಾ ಎಂಬಾಕೆಯ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ನವರಂಗ್ ಸಿನಿಮಾ ಮಂದಿರದ ಸಮೀಪದಲ್ಲಿರುವ ಸೌಜನ್ಯ ಅಪಾರ್ಟ್‌ಮೆಂಟ್ ನಿವಾಸಿಯಾಗಿರುವ ಹರೀಶ್ ಮತ್ತು ಅದೇ ಕಟ್ಟಡದಲ್ಲಿ ವಾಸಿಸುತ್ತಿರುವ ಹುಡುಗಿಯ ಕುಟುಂಬಿಕರ ಜತೆ ಹಲವು ಕಾಲದಿಂದ ಬಗೆಹರಿಯದ ಆಸ್ತಿ ವಿವಾದವಿತ್ತು.
ಇದಕ್ಕೆ ಪೂರಕವೆಂಬಂತೆ ಹಿಮಾನಿ ಮನೆಯಲ್ಲಿ ರಿಪೇರಿ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಬರುತ್ತಿದ್ದ ವಿಪರೀತ ಶಬ್ದದಿಂದ ಕಿರಿಕಿರಿ ಅನುಭವಿಸಿದ್ದ ಆರೋಪಿ ಹರೀಶ್, ತೀವ್ರವಾಗಿ ಆಕ್ಷೇಪಿಸಿದ್ದಲ್ಲದೆ ಜಗಳಕ್ಕೆ ಮುಂದಾಗಿದ್ದ.
ಇದೇ ಸಂಬಂಧ ಇಂದು ಮುಂಜಾನೆ ಕೂಡ ಹುಡುಗಿಯ ಮನೆಯವರ ಜತೆ ವಾಗ್ವಾದದಲ್ಲಿ ಹರೀಶ್ ತೊಡಗಿದ್ದ. ಈ ಸಂದರ್ಭದಲ್ಲಿ ಶಾಲೆಗೆಂದು ಹೋಗುತ್ತಿದ್ದ ಹುಡುಗಿ ಹಿಮಾನಿಯನ್ನು ಎತ್ತಿ ಹಾಕಿಕೊಂಡ ಹರೀಶ್, ತನ್ನ ಕೊಠಡಿಯೊಳಗೆ ಒತ್ತೆಯಾಳಾಗಿಟ್ಟುಕೊಂಡಿದ್ದಾನೆ.
ಇದನ್ನು ಗಮನಿಸಿದ ಅಪಾರ್ಟ್‌ಮೆಂಟ್‌ನ ಇತರ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.
ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗುವಂತೆ ಪೊಲೀಸರು ಸೂಚಿಸಿದರೂ ಅದನ್ನು ಲೆಕ್ಕಿಸದ ಹರೀಶ್, ಹುಡುಗಿಯ ಮೇಲೆ ಏಕಾಏಕಿ ಗುಂಡು ಹಾರಿಸಿ ಕೊಂದು ಹಾಕಿದ್ದಾನೆ. ಪರಿಸ್ಥಿತಿ ನಿಯಂತ್ರಿಸಲು ಯತ್ನಿಸುತ್ತಿದ್ದ ಪೊಲೀಸರತ್ತ ಕೂಡ ಆರೋಪಿ ಗುಂಡು ಹಾರಿಸಿದ್ದಾನೆ.
ಪ್ರತಿ ದಾಳಿ ನಡೆಸಿದಾಗ ಆತ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಘಟನೆಯಲ್ಲಿ ಇಬ್ಬರು ಪೊಲೀಸರು ಕೂಡ ಗಾಯಗೊಂಡಿದ್ದಾರೆ.
ಪೊಲೀಸರ ಗುಂಡಿಗೆ ಬಲಿಯಾದ ಹರೀಶ್ ನಿವೃತ್ತ ಆದಾಯ ತೆರಿಗೆ ಅಧಿಕಾರಿ ಮತ್ತು ವಕೀಲ ಎಂದು ವರದಿಗಳು ಹೇಳಿವೆ.