ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸುವುದಿಲ್ಲ: ಭಾರತ
(surgical strike | terror camps in Pak | India | M M Pallam Raju)
ಪಾಕಿಸ್ತಾನದಲ್ಲಿರುವ ಭಯೋತ್ಪಾದನಾ ಶಿಬಿರಗಳ ಮೇಲೆ ದಾಳಿಗಳನ್ನು ನಡೆಸುವ ಸಾಧ್ಯತೆಗಳನ್ನು ಭಾರತ ತಳ್ಳಿ ಹಾಕಿದೆ. ಆದರೆ ತನ್ನ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನು ಒತ್ತಿ ಹೇಳಿದೆ.
ಪಕ್ಕದ ದೇಶದೊಳಗಿರುವ ಭಯೋತ್ಪಾದಕರ ಶಿಬಿರಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದ ರಕ್ಷಣಾ ಖಾತೆಯ ರಾಜ್ಯ ಸಚಿವ ಎಂ.ಎಂ. ಪಲ್ಲಂ ರಾಜು, ಇಲ್ಲ.. ಇಲ್ಲ ಎಂದು ಉತ್ತರಿಸಿದರು.
ನಮ್ಮ ದೇಶ ಸುರಕ್ಷಿತವಾಗಿರಬೇಕು, ನಮ್ಮ ದೇಶದ ಪ್ರಜೆಗಳು ಸುರಕ್ಷಿತವಾಗಿರಬೇಕು ಮತ್ತು ನಮ್ಮ ಹಿತಾಸಕ್ತಿಗಳು ಸುರಕ್ಷಿತವಾಗಿರಬೇಕು ಎಂಬ ನಿಟ್ಟಿನಲ್ಲಿ ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಪತ್ರಕರ್ತರಿಗೆ ಅವರು ತಿಳಿಸಿದ್ದಾರೆ.
ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದನಾ ಶಿಬಿರಗಳ ವಿರುದ್ಧ ಪಾಕಿಸ್ತಾನವು ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದ ಸಚಿವ ರಾಜು, ಭಾರತದ ಹಿತಾಸಕ್ತಿ ಮತ್ತು ದೇಶವನ್ನು ಸುರಕ್ಷಿತವಾಗಿಡಬೇಕೆಂಬುದನ್ನು ಕೂಡ ಭಾರತ ಖಚಿತಪಡಿಸಿಕೊಳ್ಳಲಿದೆ ಎಂದರು.
ನಾವು ಯಾವತ್ತೂ ಬಿಟ್ಟುಕೊಡದ ನಮ್ಮ ಎದುರಿಗಿರುವ ದೇಶದ ಸಮರ್ಥ ಸುರಕ್ಷತೆಯ ಜವಾಬ್ದಾರಿಯೇ ನಮಗೆ ಪ್ರಮುಖ ಆದ್ಯತೆ. ಈ ಶಿಬಿರಗಳ ಬಗ್ಗೆ ನಮಗೆ ತಿಳಿದ ಮಾಹಿತಿಗಳನ್ನು ನೆರೆಯ ರಾಷ್ಟ್ರದ ಗಮನಕ್ಕೆ ನಾವು ತಂದಿದ್ದು, ಅವರು ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಭರವಸೆ ನಮ್ಮದು ಎಂದು ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣಾ ಸಂಸ್ಥೆಯ ವಿಚಾರಗೋಷ್ಠಿಯ ನಂತರ ಮಾತನಾಡುತ್ತಾ ಸಚಿವರು ತಿಳಿಸಿದರು.
ಪಾಕಿಸ್ತಾನದ ಜತೆಗಿನ ಮಾತುಕತೆಯ ಬಗ್ಗೆ ವಿವರಣೆ ನೀಡಿದ ಸಚಿವರು, ಎರಡೂ ದೇಶಗಳ ನಡುವಿನ ಮಾತುಕತೆ ಮುಂದುವರಿಯಲಿದೆ; ಅಂತಿಮವಾಗಿ ಇಲ್ಲಿ ಫಲಿತಾಂಶ ಬರುವ ಬಗ್ಗೆಯೂ ನನಗೆ ನಂಬಿಕೆಯಿದೆ ಎಂದರು.
ಪಾಕಿಸ್ತಾನದಲ್ಲಿ 42 ಭಯೋತ್ಪಾದನಾ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು, ಆ ದೇಶವು ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ನಿನ್ನೆಯಷ್ಟೇ ರಕ್ಷಣಾ ಸಚಿವ ಎ.ಕೆ. ಆಂಟನಿ ಅಸಮಾಧಾನ ವ್ಯಕ್ತಪಡಿಸಿದ್ದರು.