ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಹಿಳಾ ಮೀಸಲಾತಿ; ಮುಸ್ಲಿಂ, ಒಬಿಸಿ ಚರ್ಚೆ ಈಗ ಬೇಡ: ಪವಾರ್ (quota for minorities | OBC | Sharad Pawar | Women's Reservation Bill)
Bookmark and Share Feedback Print
 
ಮಹಿಳಾ ಮೀಸಲಾತಿ ಮಸೂದೆಯನ್ನು ಈಗ ಇರುವ ರೀತಿಯಲ್ಲೇ ಅಂಗೀಕಾರಕ್ಕೆ ಅವಕಾಶ ನೀಡಬೇಕು ಎಂದು ವಿರೋಧಿಗಳಿಗೆ ಮನವಿ ಮಾಡಿರುವ ಎನ್‌ಸಿಪಿ ಮುಖಂಡ ಹಾಗೂ ಕೇಂದ್ರ ಕೃಷಿ ಮತ್ತು ಆಹಾರ ಸಚಿವ ಶರದ್ ಪವಾರ್, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಒಳಮೀಸಲಾತಿ ನೀಡುವ ಕುರಿತು ನಂತರ ಚರ್ಚಿಸಬಹುದು ಎಂದು ಸಲಹೆ ನೀಡಿದ್ದಾರೆ.

ಇಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ನಿರ್ದಿಷ್ಟ ಕರಾರುಗಳಲಿಲ್ಲ. ಇದೇ ರೀತಿ ಇತರ ಹಿಂದುಳಿದ ವರ್ಗಗಳದ್ದೂ (ಒಬಿಸಿ) ಯಾವುದೇ ಉಲ್ಲೇಖಗಳಿಲ್ಲ. ಹಾಗಾಗಿ ಈಗ ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕಾರವಾಗಲು ಅವಕಾಶ ನೀಡಿ. ನಂತರ ನಾವು ಕೂತು ಎಲ್ಲಾ ವಿಚಾರಗಳ ಕುರಿತು ಸಮಾಲೋಚನೆ ನಡೆಸೋಣ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ಸಂಯುಕ್ತ ಜನತಾದಳದ ಅಧ್ಯಕ್ಷ ಶರದ್ ಯಾದವ್ ಮತ್ತು ಶಿವಸೇನೆ ಮುಂತಾದ ಪಕ್ಷಗಳ ನಾಯಕರುಗಳ ಜತೆ ಪವಾರ್ ಮತ್ತು ವಿತ್ತ ಸಚಿವ ಪ್ರಣಬ್ ಮುಖರ್ಜಿ ಮಾತುಕತೆ ಆರಂಭಿಸುವ ಸಾಧ್ಯತೆಗಳಿವೆ.

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರ ಮೀಸಲಾತಿ ಒದಗಿಸುವ ಈ ಮಸೂದೆ ರಾಜ್ಯಸಭೆಯಲ್ಲಿ ಈಗಾಗಲೇ ಅಂಗೀಕಾರ ಪಡೆದುಕೊಂಡಿದೆ. ಲೋಕಸಭೆಯಲ್ಲಿ ಇನ್ನಷ್ಟೇ ಮಸೂದೆಯನ್ನು ಮಂಡಿಸಬೇಕಿದೆ. ಬಳಿಕ ದೇಶದ ಶೇ.50ಕ್ಕಿಂತ ಹೆಚ್ಚು ರಾಜ್ಯಗಳ ವಿಧಾನಸಭೆಗಳ ಒಪ್ಪಿಗೆಯನ್ನು ಪಡೆಯುವ ಅಗತ್ಯವಿದೆ.

ಕಾಂಗ್ರೆಸ್ ನಾಯಕನ ಟೀಕೆ ಮುಗಿದ ಅಧ್ಯಾಯ...
ಕಾಂಗ್ರೆಸ್ ನಾಯಕ ಸತ್ಯವೃತ ಚತುರ್ವೇದಿಯವರು ಪವಾರ್ ಅವರನ್ನು ಟೀಕಿಸಿ ಸೃಷ್ಟಿಯಾದ ವಿವಾದವನ್ನು ತಣ್ಣಗೆ ಮಾಡಲು ಸಚಿವರು ಯತ್ನಿಸಿದ್ದಾರೆ.

ಈ ವಿಚಾರದ ಬಗ್ಗೆ ಇನ್ನು ಏನೂ ಮಾತನಾಡುವ ಅಗತ್ಯವಿಲ್ಲ. ನನ್ನ ಪ್ರಕಾರ ಇದಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವೂ ಇಲ್ಲ. ಇದರ ಕುರಿತು ಕಾಂಗ್ರೆಸ್ ಅಗತ್ಯ ಕ್ರಮವನ್ನು ಈಗಾಗಲೇ ಕೈಗೊಂಡಿದೆ. ಆ ಟೀಕೆ ಸದಭಿರುಚಿಯಿಂದ ಕೂಡಿರಲಿಲ್ಲ. ಹಾಗಾಗಿ ನನ್ನ ಪಾಲಿಗೆ ಅದು ಮುಗಿದ ಅಧ್ಯಾಯ ಎಂದಿದ್ದಾರೆ.

ಅಗತ್ಯ ವಸ್ತುಗಳ ಬೆಲೆಯೇರಿಕೆ ನಿಯಂತ್ರಿಸಲು ಪವಾರ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ, ಅವರಿಂದಾಗಿ ಕಾಂಗ್ರೆಸ್‌ಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಟಿವಿ ವಾಹಿನಿಯೊಂದರ ಜತೆ ಸಂದರ್ಶನದಲ್ಲಿ ಮಾತನಾಡುತ್ತಾ ಚತುರ್ವೇದಿ ಟೀಕಿಸಿದ್ದರು. ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರರಾಗಿದ್ದ ಚತುರ್ವೇದಿಯವರನ್ನು ಆ ಸ್ಥಾನದಿಂದ ವಜಾಗೊಳಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ