ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಂಜೆತನ ನಿವಾರಣೆಗೆ ಐವರು ಮಕ್ಕಳನ್ನು ಬಲಿಕೊಟ್ಟ ದಂಪತಿ! (Five children sacrificed | Maharashtra | Vandana Mokle | Vithal Mokle)
Bookmark and Share Feedback Print
 
ಮದುವೆಯಾಗಿ ಹಲವು ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂದಿದ್ದಕ್ಕೆ 11 ಗಂಡು ಮಕ್ಕಳನ್ನು ಬಲಿ ಕೊಡಿ ಎಂದ ಮಾಂತ್ರಿಕನ ಮಾತಿಗೆ ಸೋತ ದಂಪತಿ ಐವರು ಮಕ್ಕಳನ್ನು ಕೊಂದು ಆರನೇ ಮಗುವಿಗೂ ಅದೇ ಗತಿ ಕಾಣಿಸಲು ಮುಂದಾದಾಗ ಸಿಕ್ಕಿ ಬಿದ್ದ ಘಟನೆಯೊಂದು ವರದಿಯಾಗಿದೆ.

ಮಹಾರಾಷ್ಟ್ರದ ವಿಧರ್ಭ ಪ್ರಾಂತ್ಯದ ಹಿಂಗೋಲಿ ಜಿಲ್ಲೆಯ ಡಿಗ್ರಾಸ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ದಂಪತಿ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.

ಇವರು ನಾಲ್ಕರಿಂದ 12 ವರ್ಷದೊಳಗಿನ ಐವರು ಗಂಡು ಮಕ್ಕಳನ್ನು ಈಗಾಗಲೇ ವಿಷಪ್ರಾಶನ ಮಾಡಿ ಕೊಂದಿದ್ದರು. ಆರನೇ ಮಗುವಿಗೂ ವಿಷವುಣ್ಣಿಸಿದ ನಂತರ ಊರವರಿಗೆ ಸಂಶಯಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ ತಂತ್ರ-ಮಂತ್ರದ ಹಿನ್ನೆಲೆ ಬಯಲಾಗಿದೆ.

2009ರ ಡಿಸೆಂಬರ್‌ನಿಂದ 2010ರ ಮಾರ್ಚ್ ತಿಂಗಳ ನಡುವೆ ಐದು ಮಕ್ಕಳನ್ನು ಅಮಾನವೀಯವಾಗಿ ಕೊಂದು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾವು ಕಚ್ಚಿ ಸಾಯ್ತಿದ್ದಾರೆ ಅಂದುಕೊಂಡಿದ್ದರು...
ಹೌದು, ಸುಮಾರು 300 ಮಂದಿಯ 40ರಷ್ಟು ಮನೆಗಳನ್ನು ಹೊಂದಿರುವ ಈ ಗ್ರಾಮದಲ್ಲಿ ಒಂದರ ಹಿಂದೆ ಮತ್ತೊಂದು ಮಗು ಸಾಯುತ್ತಿದ್ದಾಗ ವೈದ್ಯರು ಕೂಡ ಇದು ಹಾವು ಕಚ್ಚಿದ್ದರಿಂದ ಉಂಟಾದ ಮರಣ ಎಂದು ಹೇಳುತ್ತಿದ್ದರು.

ಇದಕ್ಕೆ ಪೂರಕವೆಂಬಂತೆ ಸಾಯುವ ಮೊದಲು ಮಕ್ಕಳು ಬಾಯಲ್ಲಿ ನೊರೆ ಸುರಿಸುತ್ತಾ, ವಾಂತಿ ಮಾಡಿಕೊಳ್ಳುತ್ತಿದ್ದವು. ಆದರೆ ನಿರಂತರವಾಗಿ ಮಕ್ಕಳೇ ಯಾಕೆ ಹಾವು ಕಡಿತಕ್ಕೊಳಗಾಗುತ್ತಿದ್ದಾರೆ ಎಂಬ ಸಂಶಯ ಮೊಳೆತದ್ದು ಆರನೇ ಮಗು ಅದೇ ರೀತಿಯ ಲಕ್ಷಣಗಳನ್ನು ತೋರಿಸಿ ಆಸ್ಪತ್ರೆಗೆ ದಾಖಲಾದಾಗ.

ಈ ಹೊತ್ತಿಗೆ ವೈದ್ಯರಿಗೂ ಸಂಶಯ ಬಂದಿತ್ತು. ನಂತರ ಪರಿಶೀಲನೆ ನಡೆಸಿದಾಗ ಯಾವುದೋ ಗಿಡಮೂಲಿಕೆ ವಿಷವನ್ನು ಮಕ್ಕಳಿಗೆ ಕೊಡಲಾಗಿರುವುದು ಪತ್ತೆಯಾಗಿದೆ. ಆದರೆ ಅದು ಯಾವ ಗಿಡಮೂಲಿಕಾ ವಿಷ ಎಂಬುದನ್ನು ಇದುವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ಸಂಬಂಧ ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತನಿಖಾ ದಳಗಳು ತಿಳಿಸಿವೆ.

ಮಡಿಲು ತುಂಬಲು ಅತ್ತೆ-ಮಾವ ಸಾಥ್...
ವಂದನಾ ಮತ್ತು ವಿಠಲ್ ಮೋಕ್ಲೆ ಎಂಬ ದಂಪತಿ ಮದುವೆಯಾಗಿ 12 ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಠಲ್ ತಂದೆ-ತಾಯಿಯರಾದ ಕುಂಡ್ಲಿಕ್ ಮೋಕ್ಲೆ ಮತ್ತು ಕಲಾವತಿ ಮೋಕ್ಲೆ ಮಾಂತ್ರಿಕರ ಮೊರೆ ಹೋಗಿದ್ದರು. ಇದಕ್ಕಾಗಿ 11 ಗಂಡು ಮಕ್ಕಳನ್ನು ಬಲಿ ಕೊಡಬೇಕು ಎಂದು ಆತ ಸೂಚಿಸಿದ್ದ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.

ಇದನ್ನು ನಂಬಿದ ವಂದನಾ ತಾಯಿಯಾಗಲೇ ಬೇಕೆಂಬ ಮೋಹದಿಂದ ನಿಷ್ಕರುಣಿಯಾಗಿ ಐವರು ಮಕ್ಕಳ ಸಾವಿಗೆ ಕಾರಣಳಾಗಿದ್ದಳು. ಅಕ್ಕ-ಪಕ್ಕದ ಮನೆಯ ಮಕ್ಕಳಿಗೆ ವಿಷವುಣಿಸಿದ ಬಳಿಕ ಧಾರ್ಮಿಕ ವಿಧಿ ವಿಧಾನಗಳನ್ನು ಅವರ ಮೇಲೆ ಪ್ರಯೋಗಿಸಿ ಕೊಲ್ಲಲಾಗುತ್ತಿತ್ತು.

ಭಸ್ಮ, ಕಪ್ಪು ನೂಲು, ವಿಷ ತಯಾರಿಕೆಗೆ ಸಂಬಂಧಪಟ್ಟ ವಸ್ತುಗಳು ಮತ್ತು ಇತರ ಕೆಲವು ಗಿಡಮೂಲಿಕೆಗಳನ್ನು ಆರೋಪಿಗಳ ಮನೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಂದನಾ, ವಿಠಲ್ ಮೋಕ್ಲೆ, ಕುಂಡ್ಲಿಕ್ ಮೋಕ್ಲೆ, ಕಲಾವತಿ ಮೋಕ್ಲೆ ಮತ್ತು ಇವರಿಗೆ ಸಹಕರಿಸಿದ ಪರಶುರಾಮ ದಾಲ್ವಿ, ಆಶಾ ಜೆ. ದಾಲ್ವಿ ಎಂಬವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ