ಮುಂಬೈ ಪ್ರವಾಸದ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರ ಶೂಗಳನ್ನು ಎತ್ತಿಕೊಟ್ಟು ತೀವ್ರ ಟೀಕೆಗೆ ಗುರಿಯಾಗಿದ್ದ ಮಹಾರಾಷ್ಟ್ರ ಸಚಿವರು ಕೇಳಿರುವ ಪ್ರಶ್ನೆಯಿದು!
ಶಿವಸೇನೆಯ ಪ್ರತಿರೋಧದ ನಡುವೆಯೂ ಭಾರೀ ಭದ್ರತೆಯೊಂದಿಗೆ ಮುಂಬೈಯ ಹಲವೆಡೆ ವಿಹರಿಸಿದ್ದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರು ತೆಗೆದಿಟ್ಟಿದ್ದ ಶೂಗಳನ್ನು (ಚಪ್ಪಲಿ) ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ರಮೇಶ್ ಬಾಗ್ವೆಸ್ತೇಯವರು ಸ್ವತಃ ಎತ್ತಿ ಕೊಟ್ಟಿದ್ದರು.
ಘಟನೆ ನಡೆದು (ಫೆಬ್ರವರಿ 5) ತಿಂಗಳು ಕಳೆದ ನಂತರ ಪ್ರತಿಕ್ರಿಯೆ ನೀಡಿರುವ ಸಚಿವ ರಮೇಶ್, 'ಗಾಂಧಿ ತೆಗೆದಿಟ್ಟಿದ್ದ ಉಪೇಕ್ಷಿತ ಸ್ಥಿತಿಯಲ್ಲಿದ್ದ ಚಪ್ಪಲಿಯಲ್ಲಿ ಒಂದು ವೇಳೆ ಭಯೋತ್ಪಾದಕರು ಬಾಂಬ್ ಇಟ್ಟಿರುತ್ತಿದ್ದರೆ ಎಂಬ ಭೀತಿ ನನಗಾಗಿತ್ತು' ಎಂದಿದ್ದಾರೆ.
ಇದು 'ಜೀ ಹುಜೂರ್ ಸಂಸ್ಕೃತಿ' ಎಂದು ಟೀಕಿಸಿದ್ದ ಶಿವಸೇನೆಗೆ ತಡವಾಗಿ ತಿರುಗೇಟು ನೀಡಿರುವ ಕೇಂದ್ರ ಸಚಿವರು, 'ಮೊದಲು ಶಿವಸೈನಿಕರು ತಮ್ಮ ಪಕ್ಷದ ವರಿಷ್ಠ ಬಾಳ ಠಾಕ್ರೆಯವರ ಕಾಲಿಗೆ ನಮಸ್ಕರಿಸುವುದನ್ನು ನಿಲ್ಲಿಸಲಿ' ಎಂದಿದ್ದಾರೆ.
ನಾನು ರಾಹುಲ್ ಗಾಂಧಿಯವರ ಶೂಗಳನ್ನು ಎತ್ತಿಕೊಟ್ಟದ್ದಕ್ಕೆ ಕೆಲವು ರಾಜಕೀಯ ಪಕ್ಷಗಳು, ಅದರಲ್ಲೂ ಶಿವಸೇನೆ ಸಾಕಷ್ಟು ಅರಚಾಡಿತ್ತು. ಆದರೆ ಒಂದು ವೇಳೆ ಅವುಗಳಲ್ಲಿ ಬಾಂಬ್ ಇಟ್ಟಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ನೀವೇ ಊಹಿಸಿ ಎಂದರು.
ರಾಹುಲ್ ಮುಂಬೈಗೆ ಬಂದಿದ್ದ ಸಂದರ್ಭದಲ್ಲಿ ಘಾಟ್ಕೊಪ್ಪರ್‌ನಲ್ಲಿನ ಡಾ. ಅಂಬೇಡ್ಕರ್ ಅವರ ಪುತ್ಥಳಿಗೆ ಗೌರವ ಸಲ್ಲಿಸುವಾಗ ಭಾರೀ ಜನಸಂದಣಿ ಸೇರಿತ್ತು. ಹೀಗಾಗಿ ಕಳವಳಗೊಂಡಿದ್ದ ನಾನು ಸಹಜವಾಗಿಯೇ ಅವರ ಶೂಗಳನ್ನು ಎತ್ತಿಕೊಟ್ಟಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ಪವಿತ್ರವೆಂದು ಭಾವಿಸಿರುವ ಅಂಬೇಡ್ಕರ್ ಅವರ ಪುತ್ಥಳಿಯತ್ತ ಶೂಗಳು ತಳ್ಳಿಕೊಂಡು ಹೋಗಬಾರದೆಂಬುದು ಕೂಡ ನನ್ನ ಆಸ್ಥೆಯಾಗಿತ್ತು. ಹಾಗಾಗಿ ನಾನು ಶೂಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದೆ ಎಂದು ರಮೇಶ್ ತಿಳಿಸಿದ್ದಾರೆ.
ನಾನು ಮಾಡಿದ್ದನ್ನು ಟೀಕಿಸಲು ಶಿವಸೇನೆಗೆ ಯಾವ ನೈತಿಕತೆಯಿದೆ? ಶಿವಸೈನಿಕರು ಬಾಳಾಸಾಹೇಬ್ ಅವರೆದುರು ಸಾಷ್ಟಾಂಗ ನಮಸ್ಕಾರ ಮಾಡೋದು ಯಾಕೆ? ಅವರೇನು ಮಹಾರಾಜರೋ ಎಂದು ಪ್ರಶ್ನಿಸಿದ್ದಾರೆ.
ಮತ್ತೂ ಮುಂದುವರಿದ ಸಚಿವರು ಶೂ ಪ್ರಕರಣವನ್ನು ರಾಮಾಯಣಕ್ಕೆ ಹೋಲಿಸುತ್ತಾ, 'ಶ್ರೀರಾಮನ ಮೇಲಿನ ಭಕ್ತಿಯಿಂದ ಭರತ ಪಾದುಕೆಗಳನ್ನು ಪೂಜಿಸಿರಲಿಲ್ಲವೇ? ಅದೇ ರೀತಿ ನಾನು ನನ್ನ ಪಕ್ಷದ ನಾಯಕನ ಶೂಗಳನ್ನು ಎತ್ತಿಕೊಂಡರೆ ತಪ್ಪೇನು? ಇದನ್ನು ನನ್ನನ್ನು ಟೀಕಿಸುವವರು ಅರ್ಥ ಮಾಡಿಕೊಳ್ಳಬೇಕು' ಎಂದು ಸಲಹೆ ನೀಡಿದ್ದಾರೆ.