ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಿವಾಜಿ ಟರ್ಮಿನಸ್‌ನ್ನು ಬ್ರಿಟೀಷರ ಹೆಸರಿಂದ ಕರೆದ ರಾಜ್ ಠಾಕ್ರೆ (Raj Thackeray | MNS | Chhatrapati Shivaji Terminus | Victoria Terminus)
Bookmark and Share Feedback Print
 
ಕರಣ್ ಜೋಹರ್ ತನ್ನ 'ವೇಕ್ ಅಪ್ ಸಿದ್' ಚಿತ್ರದಲ್ಲಿ ಮುಂಬೈಯನ್ನು ಬಾಂಬೆ ಎಂದು ಕರೆದಿದ್ದಕ್ಕೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದ ರಾಜ್ ಠಾಕ್ರೆ ಇದೀಗ ಛತ್ರಪತಿ ಶಿವಾಜಿ ಟರ್ಮಿನಸ್‌ನ್ನು (ಸಿಎಸ್‌ಟಿ) ಅದರ ಬ್ರಿಟೀಷರ ಹೆಸರು 'ವಿಟಿ' (ವಿಕ್ಟೋರಿಯಾ ಟರ್ಮಿನಸ್) ಎಂದು ಕರೆಯುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

1889-1897ರ ಅವಧಿಯಲ್ಲಿ ಕಟ್ಟಡ ವಿನ್ಯಾಸಗಾರ ಫ್ರೆಡೆರಿಕ್ ವಿಲಿಯಮ್ ಸ್ಟೀವನ್ಸ್ ಮುಂದಾಳುತ್ವದಲ್ಲಿ ನಿರ್ಮಾಣವಾಗಿದ್ದ ವಿಕ್ಟೋರಿಯಾ ಟರ್ಮಿನಸ್‌ನ್ನು (ವಿಕ್ಟೋರಿಯಾ ಬ್ರಿಟನ್ ರಾಣಿ) 1996ರಲ್ಲಿ ಛತ್ರಪತಿ ಶಿವಾಜಿ ಟರ್ಮಿನಸ್ ಎಂದು ಮರು ನಾಮಕರಣ ಮಾಡಲಾಗಿತ್ತು. ಆದರೆ ಅದನ್ನು 'ವಿಟಿ' ಎಂದು ಕರೆಯುವ ಮೂಲಕ ರಾಜ್ ಠಾಕ್ರೆ ತಾನು ಕೂಡ ಇತರರಿಗೆ ಹೊರತಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ರಾಜ್ ಠಾಕ್ರೆ ಹೇಳಿಕೆ ಮುಂಬೈಯಲ್ಲಿ ತೀವ್ರ ಟೀಕೆಗೆ ಗುರಿಯಾಗುತ್ತಿದ್ದು, ಮಾಜಿ ಸಚಿವ ನವಾಬ್ ಮಲಿಕ್ ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ. 'ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ ಸಿಎಸ್‌ಟಿಯನ್ನು ಮತ್ತೆ ಮತ್ತೆ ವಿಟಿ ಎಂದೇ ಕರೆದರು. ಇತರರಿಗೆ ಬುದ್ಧಿವಾದ ಹೇಳಲು ಅವರಿಗೆ ಯಾವುದೇ ಹಕ್ಕಿಲ್ಲ' ಎಂದಿದ್ದಾರೆ.

ಬುಧವಾರ ಸಂಜೆ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೇ ನಿಲ್ದಾಣದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಜ್ ಠಾಕ್ರೆ, 'ಇದೀಗ ಹಲವು ವರ್ಷಗಳ ಬಳಿಕ ವಿಟಿಗೆ (ವಿಕ್ಟೋರಿಯಾ ಟರ್ಮಿನಸ್) ಬರುತ್ತಿದ್ದೇನೆ. ನಾನು ಜೆಜೆ ಆರ್ಟ್ಸ್ ಸ್ಕೂಲ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮೂರು ವರ್ಷಗಳ ಕಾಲ ಇದೇ ಮಾರ್ಗದಲ್ಲಿ ಹೋಗುತ್ತಿದ್ದೆ...' ಎಂದಿದ್ದರು.

ಯುನಿಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದ ವಿಕ್ಟೋರಿಯಾ ಟರ್ಮಿನಸ್ ಹೆಸರನ್ನು 1995ರಿಂದ 1999ರ ನಡುವೆ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಸರಕಾರ ಅಧಿಕಾರದಲ್ಲಿದ್ದಾಗ ಛತ್ರಪತಿ ಶಿವಾಸಿ ಟರ್ಮಿನಸ್ ಎಂದು ಮರು ನಾಮಕರಣ ಮಾಡಲಾಗಿತ್ತು.

ಅದೇ ಹೊತ್ತಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ವಕ್ತಾರ ಶಿರೀಷ್ ಪಾರ್ಕರ್ ಇದೊಂದು ಸಣ್ಣ ಘಟನೆ ಎಂದು ತಣ್ಣಗೆ ಮಾಡಲು ಯತ್ನಿಸಿದ್ದಾರೆ.

ಇದೊಂದು ಉದ್ದೇಶಪೂರ್ವಕವಲ್ಲದ ಮತ್ತು ತೀರಾ ಕ್ಷುಲ್ಲಕ ವಿಚಾರ. ಅದು ತಾಂತ್ರಿಕ ದೋಷದಿಂದ ಹೀಗಾಗಿತ್ತು. ವಿವಾದ ಮಾಡುವಂತಹ ವಿಚಾರ ಇದಲ್ಲ ಎಂದು ಪಾರ್ಕರ್ ತಿಳಿಸಿದ್ದಾರೆ.

ಸಮಯ ಸಿಕ್ಕಾಗಲೆಲ್ಲ ಮರಾಠಿಗರ ಪರ, ಮಹಾರಾಷ್ಟ್ರ ಪರ ಹೋರಾಡುವ ಠಾಕ್ರೆಗಳು, ಇದೀಗ ಬ್ರಿಟೀಷರ ಹೆಸರನ್ನು ಹೇಳುವ ಮೂಲಕ ಇತರರಿಗೆ ಬುದ್ಧಿ ಮಾತು ಹೇಳುವ ತಮ್ಮ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ವಿರೋಧಪಕ್ಷಗಳು ವ್ಯಾಪಕ ಟೀಕೆ ಮಾಡುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ