ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಸ್ತಾನ ವಿಧಾನಸಭೆಯಲ್ಲಿ ಮಾರ್ಷಲ್-ಶಾಸಕರ ನಡುವೆ ಕದನ (BJP MLA | Jaipur | Rajasthan Assembly | Opposition MLA)
Bookmark and Share Feedback Print
 
ಸದನದಿಂದ ಅಮಾನತಿಗೊಳಗಾದ ವಿರೋಧ ಪಕ್ಷ ಬಿಜೆಪಿಯ ಶಾಸಕರೊಬ್ಬರನ್ನು ಮಾರ್ಷಲ್‌ಗಳು ಹೊರದಬ್ಬಲು ಯತ್ನಿಸಿದಾಗ ನಡೆದ ತಳ್ಳಾಟದಲ್ಲಿ ಇಬ್ಬರು ಶಾಸಕರು ಗಾಯಗೊಂಡ ಘಟನೆ ರಾಜಸ್ತಾನ ವಿಧಾನಸಭೆಯಲ್ಲಿ ಶುಕ್ರವಾರ ನಡೆದಿದೆ.

ಬಿಜೆಪಿ ಮುಖ್ಯ ಸಚೇತಕ ಆರ್.ಎಸ್. ರಾಥೋಡ್ ಅವರನ್ನು ಸದನದಿಂದ ಹೊರಗೆ ಹಾಕಲು ಮಾರ್ಷಲ್‌ಗಳು ಮುಂದಾದಾಗ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ನಡೆದ ಎಳೆದಾಟದಲ್ಲಿ ಪಕ್ಷದ ಶಾಸಕ ಬಹದ್ದೂರ್ ಸಿಂಗ್ ಕೋಲಿ ಗಾಯಗೊಂಡರೆ ಮತ್ತು ಗುಲಾಬ್ ಚಾಂದ್ ಕಟಾರಿಯಾ ಎದೆ ನೋವಿಗೊಳಗಾಗಿ ಆಸ್ಪತ್ರೆತೆ ದಾಖಲಾಗಿದ್ದಾರೆ.

ಶಾಸಕ ಬಹದ್ದೂರ್ ಅವರ ಕೈ ಬೆರಳು ಮತ್ತು ಕಾಲಿಗೆ ಅಲ್ಪಪ್ರಮಾಣದ ಗಾಯವಾಗಿದ್ದು, ಅವರನ್ನು ವಿಧಾನಸಭೆಯ ಮೊಗಸಾಲೆಗೆ ಸ್ಥಳಾಂತರಿಸಲಾಯಿತು.

ಸ್ಪೀಕರ್ ದೀಪೇಂದ್ರ ಸಿಂಗ್ ಶೇಖಾವತ್ ಅವರು ರಾಥೋಡ್ ಅವರನ್ನು ಉಲ್ಲೇಖಿಸುತ್ತಾ, 'ಅಪರಿಚಿತರು' ಸದನದಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಹೇಳಿದ ಬಳಿಕ ಅವರನ್ನು ಸದನದಿಂದ ಹೊರಗೆ ಕಳುಹಿಸುವಂತೆ ಉಪನಾಯಕ ಜಿ.ಎಸ್. ತಿವಾರಿಗೆ ಸೂಚನೆ ನೀಡಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಶಾಸಕರಿಗೆ ಸಿಪಿಐಎಂ ಮತ್ತು ಜೆಡಿಯು ಶಾಸಕರು ಕೂಡ ಬೆಂಬಲ ನೀಡಿದರಲ್ಲದೆ, ಸರಕಾರಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಕೋಲಾಹಲ ಸೃಷ್ಟಿಸಿದ್ದರು.

ಸ್ಪೀಕರ್ ಅವರ ಆದೇಶದಂತೆ ರಾಥೋಡ್ ಅವರನ್ನು ಹೊರದಬ್ಬಲು ಮಾರ್ಷಲ್‌ಗಳು ಅವರ ಬಳಿ ಬರುತ್ತಿದ್ದಂತೆ ಪಕ್ಷದ ಶಾಸಕರು ಅವರಿಗೆ ರಕ್ಷಾ ಕವಚದಂತೆ ನಿಂತಿದ್ದರು. ಶಾಸಕರನ್ನು ಚದುರಿಸಿ ರಾಥೋಡ್ ಅವರನ್ನು ಹೊರದಬ್ಬಲು ಯತ್ನಿಸಿದಾಗ ಭಾರೀ ನೂಕಾಟ ನಡೆದ ಕಾರಣ ಕೆಲವರು ಗಾಯಗೊಂಡರು.

ಸದನದಲ್ಲಿ ತೀವ್ರ ಕೋಲಾಹಲಗಳು ನಡೆದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲಾಗಿದೆ.

ಅಸಭ್ಯ ವರ್ತನೆಯ ಕಾರಣ ನೀಡಿರುವ ಸ್ಪೀಕರ್ ಅವರು ರಾಥೋಡ್ ಅವರನ್ನು ಒಂದು ವರ್ಷ ಹಾಗೂ ಮತ್ತೊಬ್ಬ ಶಾಸಕ ಹನುಮಾನ್ ಬೇಲಿವಾಲ್ ಅವರನ್ನು ಅಧಿವೇಶನದ ಈ ಅವಧಿಯಿಂದ ಅಮಾನತುಗೊಳಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ