ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಂಧಮಾಲ್ ಪ್ರವೇಶಿಸಲು ಯತ್ನಿಸಿದ ತೊಗಾಡಿಯಾ ಬಂಧನ (VHP leader | Vishwa Hindu Parishad | Praveen Togadia | Kandhamal district)
Bookmark and Share Feedback Print
 
ನಿಷೇಧವನ್ನು ಉಲ್ಲಂಘಿಸಿ ಹಿಂಸಾಚಾರ ಪೀಡಿತ ಕಂಧಮಾಲ್ ಜಿಲ್ಲೆ ಪ್ರವೇಶಕ್ಕೆ ಯತ್ನಿಸಿದ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಅವರನ್ನು ಅವರ ಸಹಚರರೊಂದಿಗೆ ಶುಕ್ರವಾರ ರಾತ್ರಿ ಒರಿಸ್ಸಾ ಪೊಲೀಸರು ಬಂಧಿಸಿದ್ದಾರೆ.

ಕಂಧಮಾಲ್ ಜಿಲ್ಲೆಗೆ ಪ್ರವೇಶಿಸದಂತೆ ತೊಗಾಡಿಯಾ ಮೇಲಿದ್ದ ನಿಷೇಧದ ಹೊರತಾಗಿಯೂ ಅಕ್ರಮವಾಗಿ ನುಗ್ಗಲೆತ್ನಿಸಿದ ಆರೋಪದ ಮೇಲೆ ಸಿಆರ್‌ಪಿಸಿ ಸೆಕ್ಷನ್ 151ರ ಅಡಿಯಲ್ಲಿ ಬಂಧಿಸಲಾಗಿದೆ. ಅವರು ಕಂಧಮಾಲ್ ಸಮೀಪದ ಬೌದ್ ಜಿಲ್ಲೆಯ ಚಾರಿಚಚೌಕ್ ಎಂಬಲ್ಲಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಕಂಧಮಾಲ್ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ ನಂತರ ತೊಗಾಡಿಯಾ ಮತ್ತಿತರರು ಚಾರಿಚೌಕ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಬಂಧಿತ ವಿಎಚ್‌ಪಿ ನಾಯಕರನ್ನು ಚೌರಿಚೌಕ್‌ನಲ್ಲಿನ ಪೊಲೀಸ್ ಆಧೀನದಲ್ಲಿರುವ ಅರಣ್ಯ ಪರಿಶೀಲನಾ ಬಂಗ್ಲೆಯಲ್ಲಿಡಲಾಗಿತ್ತು. ಶನಿವಾರ ಬೆಳಿಗ್ಗೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2008ರ ಆಗಸ್ಟ್‌ನಲ್ಲಿ ವಿಎಚ್‌ಪಿ ನಾಯಕ ಲಕ್ಷ್ಮಣಾನಂದ ಸರಸ್ವತಿಯವರ ಹತ್ಯೆಯ ಹಿನ್ನೆಲೆಯಲ್ಲಿ ಭಾರೀ ಕೋಮುಗಲಭೆಗೆ ಕಾರಣವಾಗಿದ್ದ ಜಿಲ್ಲೆಗೆ ತಾನು ಒರಿಸ್ಸಾ ನಿಷೇಧದ ಹೊರತಾಗಿಯೂ ಪ್ರವೇಶಿಸುತ್ತೇನೆ ಎಂದು ತೊಗಾಡಿಯಾ ಪ್ರಕಟಿಸಿದ ನಂತರ ಜಿಲ್ಲಾ ಪ್ರವೇಶ ದ್ವಾರಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ಹಾಗೂ ಮ್ಯಾಜಿಸ್ಟ್ರೇಟರನ್ನು ನೇಮಿಸಿ ಪರಿಸ್ಥಿತಿಯನ್ನು ನಿಭಾಯಿಸುವಂತೆ ಜಿಲ್ಲಾಡಳಿತ ಸೂಚಿಸಿತ್ತು.

ತನ್ನ ಮೇಲೆ ಹೇರಲಾಗಿರುವ ನಿಷೇಧ ಕಾನೂನು ಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂದು ಬಣ್ಣಿಸಿರುವ ತೊಗಾಡಿಯಾ, ಕೋಮುಗಲಭೆ ಪೀಡಿತ ಜಿಲ್ಲೆಗೆ ಎರಡು ದಿನಗಳ ಪ್ರವಾಸಕ್ಕೆಂದು ಯೂರೋಪಿಯನ್ ನಿಯೋಗಕ್ಕೆ ಒಪ್ಪಿಗೆ ನೀಡಲಾಗಿದ್ದರೂ, ನನ್ನ ಮೇಲೆ ಮಾತ್ರ ನಿರ್ಬಂಧ ಹೇರಿರುವುದು ಸಮರ್ಥನೀಯವಲ್ಲ ಎಂದಿದ್ದಾರೆ.

2008ರ ಆಗಸ್ಟ್ 23ರಂದು ನಡೆದ ಸರಸ್ವತಿಯವರ ಹತ್ಯೆಯ ನಂತರ ಜಿಲ್ಲೆಯಲ್ಲಿ ನಡೆದ ತಿಂಗಳಿಗೂ ಹೆಚ್ಚು ಕಾಲದ ಕೋಮುಗಲಭೆಯಲ್ಲಿ ಕನಿಷ್ಠ 38 ಮಂದಿ ಕಗ್ಗೊಲೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಹಲವು ಚರ್ಚ್ ಮುಖ್ಯಸ್ಥರಿಗೆ ಕಂಧಮಾಲ್ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದರೂ, ಹಿಂದೂ ಸಂಘಟನೆಗಳ ಮುಖ್ಯಸ್ಥರಿಗೆ ಯಾಕೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ತೊಗಾಡಿಯಾ ಪ್ರಶ್ನಿಸಿದ್ದಾರೆ.

ಈ ನಡುವೆ ತೊಗಾಡಿಯಾ ಬಂಧನ ಖಂಡಿಸಿರುವ ವಿಶ್ವ ಹಿಂದೂ ಪರಿಷತ್ ಶನಿವಾರ 12 ಗಂಟೆಗಳ ಕಂಧಮಾಲ್ ಬಂದ್‌ಗೆ ಕರೆ ನೀಡಿದೆ. ಪೊಲೀಸರ ಪ್ರಕಾರ ಬಂದ್ ಕರೆಯಿಂದಾಗಿ ಸಾಮಾನ್ಯ ಜನಜೀವನಕ್ಕೆ ಯಾವುದೇ ಧಕ್ಕೆಯಾಗಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ