ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ.33ರ ಮೀಸಲಾತಿಯನ್ನು ಮಹಿಳೆಯರಿಗೆ ನೀಡಬೇಕು ಎಂಬ ವಾದ ಒಂದು ಕಡೆ ಕೇಳಿ ಬರುತ್ತಿದ್ದರೆ, ಇದ್ಯಾವುದರ ಬಗ್ಗೆಯೂ ಕನಿಷ್ಠ ಅರಿವಿಲ್ಲದ ಅಥವಾ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಮಂದಿ ತಮ್ಮದೇ ಲೋಕದಲ್ಲಿ ತಮಗಿಷ್ಟ ಬಂದಂತೆ ಮಹಿಳೆಯರನ್ನು ನಡೆಸಿಕೊಳ್ಳುತ್ತಿದ್ದಾರೆ.
ಆಗಿರುವುದು ಇಷ್ಟೇ, ಎರಡೆರಡು ಮದುವೆ ಮಾಡಿಕೊಂಡಿರುವ ಬಿಹಾರ ಮೂಲದ ವ್ಯಕ್ತಿಯೊಬ್ಬ ತನ್ನ ಮೊದಲನೇ ಹೆಂಡತಿಯನ್ನು ಮುಂಬೈಗೆ ಹೋಗಿ 40,000 ರೂಪಾಯಿಗೆ ಮಾರಿರುವುದು.
ಗಂಡನ ಹೆಸರು ಇರ್ಫಾನ್ ಮಿಯಾನ್. ಬಿಹಾರದ ಔರಂಗಾಬಾದ್‌ನಲ್ಲಿನ ಆಜಾದ್‌ನಗರ ನಿವಾಸಿಯಾಗಿರುವ ಈತ ದಿನಗೂಲಿ ನೌಕರ. ಈತನ ಮೊದಲ ಪತ್ನಿ ರೆಹಾನಾ. ಬಹುತೇಕ ಮುಗ್ಧೆ. ಮುಂಬೈಯಲ್ಲಿ ಕೆಲಸ ಕೊಡಿಸುವುದಾಗಿ ಇರ್ಫಾನ್ ಒಪ್ಪಿಸಿದ ನಂತರ ನಂಬಿ ಆತನ ಹಿಂದೆ ಹೆಜ್ಜೆ ಹಾಕಿದ್ದಳು.
ಮುಂಬೈ ತಲುಪುತ್ತಿದ್ದಂತೆ ಅಪರಿಚಿತನ ಮನೆಯೊಂದಕ್ಕೆ ಪತ್ನಿಯನ್ನು ಕರೆದೊಯ್ದ ಇರ್ಫಾನ್, ಸ್ವಲ್ಪ ಹೊತ್ತು ಕಾಯುವಂತೆ ಹೇಳಿ ಅಲ್ಲಿಂದ ಹೊರಬಿದ್ದಿದ್ದ. ಕೆಲವೇ ಗಂಟೆಗಳಲ್ಲಿ ವಾಪಸ್ ಬರುವುದಾಗಿ ಹೇಳಿದ್ದ ಗಂಡ ನಾಪತ್ತೆ.
ರಾತ್ರಿಯಾದರೂ ಬರದೇ ಇದ್ದಾಗ ಕಳವಳಗೊಂಡ ರೆಹಾನಾ ಮನೆಯ ಮಾಲಕನಲ್ಲಿ ವಿಚಾರಿಸಿದಾಗ, 'ನಿನ್ನ ಗಂಡ ನಿನ್ನನ್ನು ನನಗೆ ಮಾರಿ ಹೋಗಿದ್ದಾನೆ. ಆತ ವಾಪಸ್ ಬರುವುದಿಲ್ಲ' ಎಂದು ತಿಳಿಸಿದ್ದ.
ಗಾಬರಿಯಾದ ಆಕೆ ಔರಂಗಾಬಾದ್‌ನಲ್ಲಿನ ತನ್ನ ಹೆತ್ತವರ ಮನೆಗೆ ಫೋನ್ ಮಾಡಿ, ಪರಿಸ್ಥಿತಿಯನ್ನು ವಿವರಿಸಿದ್ದಳು. ತಕ್ಷಣವೇ ಮುಂಬೈಗೆ ಧಾವಿಸಿದ ಅವರು ಮನೆ ಮಾಲಕನಿಗೆ 40,000 ರೂಪಾಯಿಗಳನ್ನು ನೀಡಿ ರೆಹಾನಾಳನ್ನು ರಕ್ಷಿಸಿದ್ದಾರೆ.
ಜತೆಗೆ ಔರಂಗಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ರೆಹಾನಾ ಕುಟುಂಬವು ಎಫ್‌ಐಆರ್ ದಾಖಲಿಸಿದ್ದು, ಇರ್ಫಾನ್ ಮತ್ತು ಆತನ ಮನೆಯ ಇತರ ಮೂವರ ಮೇಲೆ ಕೇಸು ಹಾಕಲಾಗಿದೆ.
ಪೊಲೀಸರ ಪ್ರಕಾರ ಇರ್ಫಾನ್ ಭೂಗತನಾಗಿದ್ದಾನೆ. ಬಹುಶಃ ಆತ ಜಾರ್ಖಂಡ್‌ನ ಧಾನಾಬಾದ್‌ನಲ್ಲಿರುವ ತನ್ನ ಎರಡನೇ ಪತ್ನಿಯ ಮನೆಯಲ್ಲಿರಬಹುದು ಎಂದು ಡಿಎಸ್‌ಪಿ ದಿನೇಶ್ ಪ್ರಸಾದ್ ಸಿಂಗ್ ಶಂಕೆ ವ್ಯಕ್ತಪಡಿಸಿದ್ದಾರೆ.
ಬಂಧನ ವಾರೆಂಟ್‌ಗಾಗಿ ನ್ಯಾಯಾಲಯದ ಮೊರೆ ಹೋಗಿರುವ ಪೊಲೀಸರು, ಆದೇಶ ಕೈಗೆ ಸಿಕ್ಕ ತಕ್ಷಣ ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.