ವರುಣ್ ಗಾಂಧಿ ದ್ವೇಷ ಯಾಕೆ?: ಟೀಕಾಕಾರರಿಗೆ ಗಡ್ಕರಿ ಪ್ರಶ್ನೆ
ನವದೆಹಲಿ, ಶನಿವಾರ, 20 ಮಾರ್ಚ್ 2010( 11:22 IST )
ವಿವಾದಿತ ವರುಣ್ ಗಾಂಧಿಯವರನ್ನು ಬಿಜೆಪಿಯ ರಾಷ್ಟ್ರೀಯ ಸಮಿತಿಗೆ ಸೇರಿಸಿಕೊಂಡಿರುವುದಕ್ಕೆ ಭಾರೀ ಟೀಕೆಗಳು ಬರುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಹಿಂದಿನ ತಪ್ಪುಗಳಿಗಾಗಿ ಗಾಂಧಿಯನ್ನು ಈಗಲೂ ಯಾಕೆ ದ್ವೇಷಿಸುತ್ತಿದ್ದೀರಿ?; ಅವರಿಗೂ ಒಂದು ಅವಕಾಶ ನೀಡಿ ಎಂದಿದ್ದಾರೆ.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದ ವರುಣ್ ಗಾಂಧಿ ಮುಸ್ಲಿಂ ಸಮುದಾಯದ ವಿರುದ್ಧ ಕಟುವಾದ ಮಾತುಗಳನ್ನು ಆಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಗಂಭೀರ ಪ್ರಕರಣಗಳನ್ನೂ ದಾಖಲಿಸಲಾಗಿತ್ತು.
ಇಂತಹ ಗಂಭೀರ ಆರೋಪಗಳನ್ನು ಹೊತ್ತಿರುವ ವರುಣ್ ಗಾಂಧಿಯವರನ್ನು ಬಿಜೆಪಿ ತನ್ನ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿರುವುದಕ್ಕೆ ಪಕ್ಷದ ಕೆಲವು ಭಾಗಗಳಿಂದ ಮತ್ತು ಮಾಧ್ಯಮಗಳಿಂದ ಟೀಕೆ ವ್ಯಕ್ತವಾಗಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಾರಥಿ ಗಡ್ಕರಿ, ವರುಣ್ ಗಾಂಧಿಯವರಿಗೂ ಒಂದು ಅವಕಾಶ ನೀಡುವುದು ಅಗತ್ಯವಿದೆ; ಅವರ ಗತಕಾಲದ ದಾಖಲೆಗಳನ್ನು ಇಟ್ಟುಕೊಂಡು ಯಾಕೆ ಕ್ಯಾತೆ ತೆಗೆಯುತ್ತಿದ್ದೀರಿ. ಅದರಿಂದಾಗಿ ಅವರು ಅವಕಾಶ ವಂಚಿತರಾಗಬಾರದು ಎನ್ನುವ ಮೂಲಕ ನೆಹರೂ-ಗಾಂಧಿ ಕುಟುಂಬದ ಕುಡಿಯ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವರುಣ್ ಗಾಂಧಿ ಬುದ್ಧಿವಂತ ನಾಯಕನಾಗಿದ್ದು, ಅಗಾಧ ಸಾಮರ್ಥ್ಯ ಹೊಂದಿದವರಾಗಿದ್ದಾರೆ. ಅವರು ಬೆಳೆಯುತ್ತಿರುವ ನಾಯಕ. ಅವರಲ್ಲಿ ಏನಾದರೂ ತಪ್ಪುಗಳಿದ್ದರೆ ಅದನ್ನು ನಾವು ಸರಿಪಡಿಸುತ್ತೇವೆ ಎಂದರು.
ನಟ ಹಾಗೂ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಹೊಸ ತಂಡದ ಕುರಿತು ತೀವ್ರವಾಗಿ ಟೀಕಿಸಿದ ಮರುದಿನ ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ಗಡ್ಕರಿ, ಅಸಮಾಧಾನ ಹೊಂದಿದ್ದವರು ನೇರವಾಗಿ ನನ್ನ ಜತೆಯೇ ಮಾತನಾಡಲಿ; ಮಾಧ್ಯಮಗಳ ಮುಂದಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಯಶವಂತ್ ಸಿನ್ಹಾರಂತಹ ನಾಯಕರನ್ನು ಬಿಜೆಪಿ ಪಟ್ಟಿಯಿಂದ ಕೈ ಬಿಟ್ಟಿರುವುದಕ್ಕೆ ಪ್ರತಿಕ್ರಿಯಿಸಿದ್ದ ಶತ್ರುಘ್ನ, ನಾನು ನಿಟ್ಟುಸಿರು ಬಿಡುವುದಿಲ್ಲ, ಬದಲಿಗೆ ತುಟಿಗಳನ್ನು ಮುಚ್ಚಿಕೊಂಡು, ಕಣ್ಣೀರನ್ನು ನುಂಗುತ್ತೇನೆ ಎಂದಿದ್ದರು.
ಇದಕ್ಕೆ ಸ್ಪಷ್ಟನೆ ನೀಡಿರುವ ಗಡ್ಕರಿ, 'ಯಶವಂತ್ ಸಿನ್ಹಾ ಮತ್ತು ಅರುಣ್ ಶೌರಿಯವರು ಅಡ್ವಾಣಿಯವರ ಜತೆ ಮುನಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಸಮಿತಿಯಿಂದ ಕೈ ಬಿಡಲಾಗಿದೆ ಎಂದು ಹೇಳುವುದು ಸರಿಯಲ್ಲ. ಪ್ರತಿಯೊಬ್ಬರನ್ನೂ ತಂಡದಲ್ಲಿ ಸೇರಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ' ಎಂದರು.