ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆಡ್ಲಿಯನ್ನು ಭಾರತ ವಿಚಾರಣೆ ನಡೆಸಬಹುದು: ಚಿದಂಬರಂ ಸ್ಪಷ್ಟನೆ
(India | United States | David Headley | P Chidambaram)
ಹೆಡ್ಲಿಯನ್ನು ಭಾರತ ವಿಚಾರಣೆ ನಡೆಸಬಹುದು: ಚಿದಂಬರಂ ಸ್ಪಷ್ಟನೆ
ನವದೆಹಲಿ, ಶನಿವಾರ, 20 ಮಾರ್ಚ್ 2010( 13:19 IST )
ಮುಂಬೈ ಭಯೋತ್ಪಾದನಾ ದಾಳಿ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿಯನ್ನು ಭಾರತೀಯ ತನಿಖಾ ಅಧಿಕಾರಿಗಳು ವಿಚಾರಣೆ ನಡೆಸಲು ಅಮೆರಿಕಾ ಒಪ್ಪಿಕೊಂಡಿದೆ ಎಂದು ಗೃಹ ಸಚಿವ ಪಿ. ಚಿದಂಬರಂ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಅಮೆರಿಕಾ ಅಟಾರ್ನಿ ಜನರಲ್ ಎರಿಕ್ ಹೋಲ್ಡರ್ ಅವರೊಂದಿಗೆ ಇಂದು ದೂರವಾಣಿ ಸಂಭಾಷಣೆ ನಡೆಸಿದ ನಂತರ ಸಚಿವರು ಇದನ್ನು ತಿಳಿಸಿದ್ದಾರೆ.
ಹಾಗಾಗಿ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಪಿತೂರಿ ನಡೆಸಿರುವುದನ್ನು ಒಪ್ಪಿಕೊಂಡಿರುವ ಪಾಕಿಸ್ತಾನ ಸಂಜಾತ ಅಮೆರಿಕನ್ ಪ್ರಜೆ ಹೆಡ್ಲಿ ಯಾನೆ ದಾವೂದ್ ಗಿಲಾನಿಯನ್ನು ಪ್ರಶ್ನಿಸಬಹುದಾಗಿದೆ ಎಂದು ಚಿದಂಬರಂ ತಿಳಿಸಿದ್ದಾರೆ.
ದಕ್ಷಿಣ ಮತ್ತು ಕೇಂದ್ರ ಏಷಿಯಾದ ಅಮೆರಿಕಾ ಸಹಾಯಕ ಕಾರ್ಯದರ್ಶಿ ರಾಬರ್ಟ್ ಬ್ಲೇಕ್ ಕೂಡ ಅಮೆರಿಕಾದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಅಫಘಾನಿಸ್ತಾನ ಮತ್ತು ಭಾರತ ಪ್ರವಾಸದಲ್ಲಿರುವ ಬ್ಲೇಕ್, ಹೆಡ್ಲಿಯನ್ನು ವಿಚಾರಣೆಗೊಳಪಡಿಸಲು ಭಾರತದ ತನಿಖಾ ಅಧಿಕಾರಿಗಳಿಗೆ ಮುಕ್ತ ಅವಕಾಶವಿದೆ. ಆದರೆ ಗಡೀಪಾರು ಅಥವಾ ಭಾರತಕ್ಕೆ ಹಸ್ತಾಂತರ ಮಾಡುವುದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಅಮೆರಿಕಾ ಹೊರಿಸಿದ್ದ 12 ಆರೋಪಗಳನ್ನು ಗುರುವಾರ ಹೆಡ್ಲಿ ಚಿಕಾಗೋದ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದ. ಇದರಿಂದಾಗಿ ಮರಣದಂಡನೆ ಮತ್ತು ಭಾರತಕ್ಕೆ ಗಡೀಪಾರು ಶಿಕ್ಷೆಯನ್ನು ತಪ್ಪಿಸಿಕೊಂಡಿರುವ ಹೆಡ್ಲಿಯನ್ನು ಭಾರತ ವಿಚಾರಣೆ ನಡೆಸಲು ಅವಕಾಶವಿದೆ ಎಂದು ಅಮೆರಿಕಾ ಸ್ಪಷ್ಟಪಡಿಸಿದೆ.
2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದಿದ್ದ ದಾಳಿಯಲ್ಲಿ ತಾನು ಪಿತೂರಿ ನಡೆಸಿರುವುದು ಹೌದು. ಅಲ್ಲದೆ ಪಾಕಿಸ್ತಾನದಲ್ಲಿನ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆಯ ತರಬೇತಿ ಶಿಬಿರಗಳಿಗೆ 2002ರಿಂದ 2005ರ ನಡುವೆ ಐದು ಬಾರಿ ಭೇಟಿ ನೀಡಿದ್ದೆ ಎಂದು ಆತ ನ್ಯಾಯಾಲಯದಲ್ಲಿ ತಿಳಿಸಿದ್ದಾನೆ.
ಮುಂಬೈ ದಾಳಿ ಮತ್ತು ಪ್ರವಾದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದ ಡೆನ್ಮಾರ್ಕ್ ಪತ್ರಿಕೆಯ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಹೆಡ್ಲಿಯನ್ನು ಕಳೆದ ವರ್ಷ ಅಮೆರಿಕಾ ಬಂಧಿಸಿತ್ತು.
ಈತ ಅಮೆರಿಕಾದ ಎಫ್‌ಬಿಐ ಪರವಾಗಿ ಬೇಹುಗಾರಿಕೆ ಕೂಡ ನಡೆಸುತ್ತಿದ್ದ ಡಬ್ಬಲ್ ಏಜೆಂಟ್ ಎಂಬ ಆರೋಪಗಳು ಕೂಡ ಕೇಳಿ ಬಂದಿದ್ದು, ಇದೇ ಕಾರಣದಿಂದ ಗಡೀಪಾರು ಮಾಡುವ ಅವಕಾಶವನ್ನು ಅಮೆರಿಕಾ ತಪ್ಪಿಸಿದೆ ಎನ್ನಲಾಗಿದೆ.