ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೇಮ್ಸ್‌ಗೆ ಗೋಮಾಂಸ; ನುಣುಚಿಕೊಳ್ಳುತ್ತಿರುವ ಕಾಂಗ್ರೆಸ್: ಬಿಜೆಪಿ
(beef | Delhi Assembly | Commonwealth Games | Congress)
ಇದೇ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗೋಮಾಂಸಕ್ಕೆ ಅವಕಾಶ ನೀಡಲಾಗುತ್ತದೆ ಎಂದು ದೆಹಲಿ ಸರಕಾರದ ಮುಖ್ಯ ಕಾರ್ಯದರ್ಶಿ ನೀಡಿದ ಹೇಳಿಕೆಯಿಂದ ಸರಕಾರ ನುಣುಚಿಕೊಳ್ಳುತ್ತಿದೆ ಎಂದು ಆರೋಪಿಸಿದ ಬಿಜೆಪಿ, ಸ್ಪಷ್ಟನೆ ನೀಡುವಂತೆ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಆಗ್ರಹಿಸಿ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದೆ.
ದೆಹಲಿ ಗೇಮ್ಸ್ ಸಂದರ್ಭದಲ್ಲಿ ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗೆ ಪೂರೈಸಲು ಗೋಮಾಂಸವನ್ನು ಆಮದು ಮಾಡಿಕೊಳ್ಳಲಾಗುತ್ತದೆ ಎಂದು ದೆಹಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರಾಕೇಶ್ ಮೆಹ್ತಾ ಇತ್ತೀಚೆಗಷ್ಟೇ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು.
ಇದನ್ನು ದೆಹಲಿ ವಿಧಾನಸಭೆಯಲ್ಲಿ ಶುಕ್ರವಾರ ಉಲ್ಲೇಖಿಸಿದ ವಿರೋಧ ಪಕ್ಷದ ನಾಯಕ ವಿ.ಕೆ. ಮಲ್ಹೋತ್ರಾ ವಿಶೇಷ ಚರ್ಚೆಯ ಸಂದರ್ಭದಲ್ಲಿ ಸರಕಾರದಿಂದ ಸ್ಪಷ್ಟನೆ ಕೇಳಿದರು.
ಗೋಮಾಂಸ ಮಾರಾಟ ಮತ್ತು ಶೇಖರಣೆಯನ್ನು ನಿಷೇಧಿಸುವ ದೆಹಲಿ ರಾಜ್ಯ ಸರಕಾರದ 1994ರ ದೆಹಲಿ ಪಶುಗಳ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ ಬಿಜೆಪಿ ಶಾಸಕರು, ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಗೇಮ್ಸ್‌ಗೆ ಗೋಮಾಂಸ ಪೂರೈಸುವ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದರು.
ಕಾಯ್ದೆಯು ಸದನದಲ್ಲಿ ಒಮ್ಮತದಿಂದ ಅಂಗೀಕಾರವಾಗಿತ್ತು. ಇದನ್ನು ಜಾರಿಗೊಳಿಸಿದರೆ ನಗರದ ಸರಕಾರವು ಇದನ್ನು ಜಾರಿಗೆ ತರುವುದು ಕಾನೂನಿನಂತೆ ಕಡ್ಡಾಯವಾಗುತ್ತದೆ ಎಂದು ಮಲ್ಹೋತ್ರಾ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ದೀಕ್ಷಿತ್, ಗೋಮಾಂಸ ಪೂರೈಕೆಯನ್ನು ನಿರ್ಧರಿಸಬೇಕಾಗಿರುವುದು ಗೇಮ್ಸ್ ಸಂಘಟನಾ ಸಮಿತಿ, ಬಾಣಸಿಗರು ಮತ್ತು ದೆಹಲಿ ಮಹಾನಗರ ಪಾಲಿಕೆಯೇ ಹೊರತು ದೆಹಲಿ ಸರಕಾರವಲ್ಲ ಎಂದು ಮೆಹ್ತಾ ಹೇಳಿದ್ದರು; ಆದರೆ ಬಿಜೆಪಿ ಸದಸ್ಯರು ಕೇವಲ ರಾಜಕೀಯಕ್ಕಾಗಿ ಕೋಮುವಾದವನ್ನು ಬೆರೆಸಿ ಇದನ್ನು ವಿವಾದಕ್ಕೊಳಪಡಿಸುತ್ತಿದ್ದಾರೆ ಎಂದರು.
ಈ ವಿಚಾರದಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಇದರಲ್ಲಿ ನೀವು ರಾಜಕೀಯ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದ್ದೀರಿ. ನೀವ್ಯಾಕೆ ದೆಹಲಿ ಮಹಾನಗರ ಪಾಲಿಕೆಯಲ್ಲಿ ಈ ವಿಚಾರವನ್ನು ಎತ್ತುತ್ತಿಲ್ಲ? ನಿಮ್ಮದು ಕೋಮುವಾದಿತನವಾಗಿರುವುದರಿಂದ ಇಲ್ಲಿ ನೀವು ಇದನ್ನು ವಿವಾದವನ್ನಾಗಿಸುತ್ತಿದ್ದೀರಿ ಎಂದು ದೀಕ್ಷಿತ್ ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದರು.
ನಂತರ ಮುಖ್ಯ ಕಾರ್ಯದರ್ಶಿ ಲಿಖಿತ ಹೇಳಿಕೆಯನ್ನು ಸ್ಪಷ್ಟಪಡಿಸಿದ ದೀಕ್ಷಿತ್, ಗೋಮಾಂಸ ಪೂರೈಕೆ ಸಂಬಂಧ ಅನುಮತಿ ನೀಡುವ ಅಧಿಕಾರ ದೆಹಲಿ ಮಹಾನಗರ ಪಾಲಿಕೆಯದ್ದೇ ಹೊರತು ಸರಕಾರದ್ದಲ್ಲ ಎಂದರು.
ಆದರೆ ಇದರಿಂದ ತೃಪ್ತರಾಗದ ಬಿಜೆಪಿ ಸದಸ್ಯರು, ಒಂದು ವೇಳೆ ಗೇಮ್ಸ್‌ನಲ್ಲಿ ಗೋಮಾಂಸ ಪೂರೈಸಿದಲ್ಲಿ ಗೇಮ್ಸ್ ನಡೆಯಲು ಅವಕಾಶ ನೀಡುವುದಿಲ್ಲ. ಲಕ್ಷಗಟ್ಟಲೆ ಜನ ಗೇಮ್ಸ್ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಾರೆ ಎಂದು ಬೆದರಿಕೆ ಹಾಕಿದ್ದಾರೆ.
ಗದ್ದಲದ ಹಿನ್ನೆಲೆಯಲ್ಲಿ ಹಲವು ಬಾರಿ ವಿಧಾನಸಭಾ ಕಲಾಪನ್ನು ಸ್ಪೀಕರ್ ಮುಂದೂಡಿದ್ದರು.