ಕೇಂದ್ರ ಸರಕಾರದ ಆಪರೇಶನ್ ಗ್ರೀನ್ ಹಂಟ್ ವಿರೋಧಿಸಿ ಮಾವೋವಾದಿಗಳು ಆರು ರಾಜ್ಯಗಳಲ್ಲಿ 48 ಗಂಟೆಗಳ ಬಂದ್‌ಗೆ ಕರೆ ನೀಡಿದ್ದು, ಫಶ್ಚಿಮ ಬಂಗಾಳದ ಮಿಡ್ನಾಪುರ್‌ನಲ್ಲಿ ಸೇತುವೆಯನ್ನು ಸ್ಪೋಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಹಾರ್ ಜಾರ್ಖಂಡ್, ಒರಿಸ್ಸಾ ,ಪಶ್ಚಿಮ ಬಂಗಾಳ, ಚತ್ತಿಸ್‌ಗಢ್ ಮತ್ತು ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಗಡಿಭಾಗಗಳಾದ ಭಂಡಾರಾ, ಚಂದ್ರಾಪುರ್ ಮತ್ತು ಗಡ್‌ಚಿರೋಲಿ ಜಿಲ್ಲೆಗಳಿಲ್ಲಿ ಕೂಡಾ ಬಂದ್‌ಗೆ ಕರೆ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಆಪರೇಶನ್ ಗ್ರೀನ್ ಹಂಟ್,ಮಾವೋವಾದಿಗಳ ನೇತೃತ್ವದ ಜನಸಾಮಾನ್ಯರನ್ನು ಗುರಿಯಾಗಿಸಿಕೊಂಡಿರುವುದರಿಂದ ಮಾರ್ಚ್ 22 ಮತ್ತು ಮಾರ್ಚ್ 23 ರಂದು ಬಂದ್‌ಗೆ ಕರೆ ನೀಡಲಾಗಿದೆ ಎಂದು ಮಾವೋವಾದಿ ಮುಖಂಡ ಕಿಶನ್‌ಜಿ ಅಲಿಯಾಸ್ ಕೋಟೆಶ್ವರ್ ರಾವ್ ತಿಳಿಸಿದ್ದಾರೆ.
ಮಾವೋವಾದಿಗಳು ಬಂದ್‌ಗೆ ಕರೆ ನೀಡಿದ ಕೆಲವೇ ಗಂಟೆಗಳಲ್ಲಿ, ಪಶ್ಚಿಮ ಬಂಗಾಳದ ಮಿಡ್ನಾಪುರ್ ಜಿಲ್ಲೆಯಲ್ಲಿ ಸೇತುವೆ ಹಾಗೂ ರೈಲ್ವೆ ಹಳಿಗಳನ್ನು ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ, ಮಾವೋವಾದಿಗಳ ಮುಖಂಡ ಅಪ್ಪಾರಾವ್ ಅವರ ಹತ್ಯೆಗೆ ಪೊಲೀಸರು ಕಾರಣರಾಗಿದ್ದಾರೆ.ಎಂದು ಮಾವೋವಾದಿ ಮುಖಂಡ ಕಿಶನ್‌ಜಿ ಆರೋಪಿಸಿದ್ದಾರೆ.ನಕ್ಸಲ್ ಮುಖಂಡ ಅಪ್ಪಾರಾವ್ ಯಾವತ್ತು ಹಿಂಸಾಚಾರ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ ಎಂದು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
ಸಾಮಾನ್ಯ ಜನತೆಗೆ ಹೊರೆಯಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ, ಅಗತ್ಯ ವಸ್ತುಗಳ ದರ ಏರಿಕೆಯನ್ನು ಪ್ರತಿಭಟಿಸಿ ಕೂಡಾ ಬಂದ್‌ಗೆ ಕರೆ ನೀಡಲಾಗಿದೆ ಎಂದು ಮಾವೋವಾದಿಗಳ ಮುಖಂಡ ಕಿಶನ್‌ಜಿ ತಿಳಿಸಿದ್ದಾರೆ.