ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಲಿಂಗ ರತಿ : ಕೇಂದ್ರದಿಂದ ರಹಸ್ಯವಾಗಿ ತಿದ್ದುಪಡಿ? (Government | HC order | Homosexuality | Supreme Court, Gay Law)
ಸಲಿಂಗ ರತಿ ವಿವಾದದ ಚೆಂಡು ಸುಪ್ರೀಂಕೋರ್ಟ್ ಅಂಗಳದಲ್ಲಿರುವ ನಡುವೆಯೇ ಕೇಂದ್ರ ಗೃಹ ಇಲಾಖೆ ಸದ್ದಿಲ್ಲದೇ ಈ ಬಗ್ಗೆ ಕಾನೂನು ತಿದ್ದುಪಡಿಗೆ ಹೊರಡುವ ಮೂಲಕ ಇಬ್ಬಗೆ ನೀತಿ ಅನುಸರಿಸಲು ಮುಂದಾಗಿದೆ.
ಮೂಲವೊಂದರ ಪ್ರಕಾರ, ಗೃಹ ಇಲಾಖೆ ಕಾನೂನು ಸಚಿವಾಲಯಕ್ಕೆ ಸೂಚನೆ ನೀಡಿದ್ದು, ಸಲಿಂಗರತಿ ಅಪರಾಧ ವ್ಯಾಪ್ತಿಯೊಳಗೆ ಬಾರದಂತೆ ಭಾರತೀಯ ದಂಡ ಸಂಹಿತೆಗೆ ತಿದ್ದುಪಡಿ ಮಾಡಬೇಕೆಂದು ಸೂಚಿಸಿದೆ.
ವಿವಾದಾಸ್ಪದ ಸಲಿಂಗರತಿ ಕಾಯ್ದೆ ಕುರಿತು ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನ ಕುರಿತಂತೆ ಯಾವುದೇ ನಿರ್ದಿಷ್ಟ ನಿಲುವು ತಳೆಯದಿದ್ದ ಕೇಂದ್ರ ಸರ್ಕಾರ ಈ ಬಗ್ಗೆ ಸುಪ್ರೀಂಕೋರ್ಟ್ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿತ್ತು.
ಹೈಕೋರ್ಟ್ ತೀರ್ಪಿಗೆ ವಿರೋಧ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡುವ ಮೂಲಕ ವಿವಾದದ ಚೆಂಡನ್ನು ಸುಪ್ರೀಕೋರ್ಟ್ ಅಂಗಳಕ್ಕೆ ತಳ್ಳಿಬಿಟ್ಟಿತ್ತು.
ಸಲಿಂಗ ರತಿ ಹಕ್ಕನ್ನು ಬೆಂಬಲಿಸುವ ಕುರಿತು ಸಂಪುಟದ ಕೆಲವು ಸದಸ್ಯರಿಗೆ ಅಸಮಾಧಾನವಿದ್ದರೂ ಸಹ ಈ ವಿವಾದಾಸ್ಪದ ವಿಚಾರಕ್ಕೆ ತಕ್ಕಂತೆ ಸ್ಪಷ್ಟ ನಿಲುವು ಹೊಂದಲು ಕೇಂದ್ರ ನಿರಾಕರಿಸಿತ್ತು. ಮುಸ್ಲಿಂ ಸಂಘಟನೆಗಳು ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಲ್ಲದೇ ಕ್ರೈಸ್ತ ಮಂಡಳಿ, ಯೋಗ ಗುರು ಬಾಬಾ ರಾಮದೇವ್ ಅವರು ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.