ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಭೆಯಲ್ಲೇ ಕಾರ್ಯಕರ್ತನಿಗೆ ತುಳಿದ ಕಾಂಗ್ರೆಸ್ ಸಚಿವ! (NCP | Abdul Sattar | assaults | activist | Maharashtra | Congress,)
ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ರಾಜ್ಯ ಸಚಿವ ಅಬ್ದುಲ್ ಸತ್ತಾರ್, ಪಕ್ಷದ ಕಾರ್ಯಕರ್ತನೊಬ್ಬನಿಗೆ ಸಭೆಯಲ್ಲಿಯೇ ಒದ್ದ ಘಟನೆ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಔರಂಗಾದಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್, ಎನ್‌ಸಿಪಿ ಹಾಗೂ ಪ್ರಗತಿ ಅಘಾದಿ ಪಕ್ಷಗಳ ಮೈತ್ರಿ ಮೂಲಕ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಚರ್ಚಿಸಲು ಹಮ್ಮಿಕೊಂಡಿದ್ದ ಸಭೆಗೆ ಸಚಿವ ಸತ್ತಾರ್ ಆಗಮಿಸಿದ್ದರು.
ಸಭೆಯಲ್ಲಿ ಮೂರು ಪಕ್ಷಗಳ ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಚಿವರಿಗಾಗಿ ಸ್ಥಳವೊಂದನ್ನು ಕಾಯ್ದಿರಿಸಲಾಗಿತ್ತು, ಆದರೆ ಈ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ತಕರಾರು ತೆಗೆದಿದ್ದರಿಂದ ಜಟಾಪಟಿ ನಡೆದಿತ್ತು.
ಈ ಗೊಂದಲ ನಡೆಯುತ್ತಿದ್ದಾಗಲೇ ಸಚಿವ ಸತ್ತಾರ್ ಅವರ ಕಾರ್ಯದರ್ಶಿ ಕಾಂಗ್ರೆಸ್ ಕಾರ್ಯಕರ್ತ ಮೊಹಮ್ಮದ್ ನಾಸಿರ್‌ಗೆ ತಪರಾಕಿ ಬಾರಿಸಿದ್ದ, ಅದರ ಬೆನ್ನಿಗೆ ಸಚಿವರು ಕೂಡ ಸಾಥ್ ನೀಡಿ ಜಾಡಿಸಿ ಒದ್ದ ಘಟನೆ ಭಾನುವಾರ ನಡೆದಿತ್ತು.
ಅಬ್ದುಲ್ ಸತ್ತಾರ್ ಅವರು ಸಿಲ್ಲೋದ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಶಾಸಕರಾಗಿದ್ದಾರೆ. ಘಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾಸಿರ್ ತಮ್ಮ ಪಕ್ಷದ ಕಾರ್ಯಕರ್ತನಲ್ಲ, ಅಲ್ಲದೇ ಆತ ಯಾರೆಂಬುದು ತನಗೆ ಗೊತ್ತಿಲ್ಲ ಎಂದಿದ್ದರು.
ಮೊಹಮ್ಮದ್ ನಾಸಿರ್ ಕಾಂಗ್ರೆಸ್ ಕಾರ್ಯಕರ್ತನಲ್ಲ, ಪಕ್ಷದ ಸಭೆಯಲ್ಲಿ ಗೊಂದಲ ನಡೆಸಿದ ಆತನ ವಿರುದ್ಧ ತಾನು ದೂರು ನೀಡುವುದಾಗಿ ಸಚಿವ ಸತ್ತಾರ್ ಈ ಸಂದರ್ಭದಲ್ಲಿ ತಿಳಿಸಿದ್ದರು.
ನಾಸಿರ್ ಕಿಡಿ: ಸಚಿವ ಸತ್ತಾರ್ ಅವರು ಹೊಡಿದಿರುವ ಬಗ್ಗೆ ಕಿಡಿಕಾರಿರುವ ನಾಸಿರ್, ತಾನು ಕಳೆದ 20ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದೇನೆ. ಸಚಿವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದರು ಕೂಡ, ಪೊಲೀಸರು ಈವರೆಗೂ ಎಫ್‌ಐಆರ್ ದಾಖಲಿಸಿಲ್ಲ ಎಂದು ನಾಸಿರ್ ಆರೋಪಿಸಿದ್ದಾರೆ.