ಧನಬಾದ್ (ಜಾರ್ಖಂಡ್), ಸೋಮವಾರ, 22 ಮಾರ್ಚ್ 2010( 12:58 IST )
ಕರೆಂಟು ಇರುತ್ತದೋ ಇಲ್ಲವೋ, ಬಿಲ್ ಅಂತೂ ಪ್ರತಿ ತಿಂಗಳೂ ಸರಿಯಾಗಿಯೇ ಬರುತ್ತಿರುತ್ತದೆ. ಆದರೆ, ಈ ಬಿಲ್‌ನ ಮೊತ್ತ ಮಿತಿ ಮೀರಿದರೆ ಬೆಲೆ ಏರಿಕೆಯ ಈ ದಿನಗಳಲ್ಲಿ ಜನಸಾಮಾನ್ಯರು ಏನು ಮಾಡಬೇಕು? ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ತೋರಿಸಿಕೊಟ್ಟಿದ್ದಾನೆ ಜಾರ್ಖಂಡ್‌ನ ವ್ಯಕ್ತಿಯೊಬ್ಬಾತ.
ಮಹಮದ್ ಶಮೀಮ್ ಎಂಬ 45ರ ಹರೆಯದ, ಟೋಪ್‌ಚಾಂಚಿ ನಿವಾಸಿಗೆ 92 ಸಾವಿರ ರೂಪಾಯಿ ಮೊತ್ತದ ವಿದ್ಯುತ್ ಬಿಲ್ ಕಳುಹಿಸಲಾಗಿತ್ತು. ಅದರ ಮೇಲೆ ವಿದ್ಯುತ್ ಕಳವು ಆಪಾದನೆಯನ್ನೂ ಹೊರಿಸಲಾಗಿತ್ತು.
ಆತಂಕಗೊಂಡು ಮತ್ತು ಅವಮಾನ ತಾಳದೆ ಶಮೀಮ್ ಭಾನುವಾರ ಪೊಲೀಸ್ ಉಪಾಯುಕ್ತರ ಕಚೇರಿಯೆದುರು ಸೀಮೆಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹತಾಶೆಯಿಂದ ಈ ಕೃತ್ಯಕ್ಕೆ ಮುಂದಾಗಿರುವುದಾಗಿ ಆತ ಬರೆದಿಟ್ಟ ಚೀಟಿಯಲ್ಲಿ ತಿಳಿಸಿದ್ದಾನೆ.
ಹೊತ್ತಿ ಉರಿಯುತ್ತಿದ್ದ ಆತನನ್ನು ಪಾಟಲಿಪುತ್ರ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಆಸ್ಪತ್ರೆ ಹಾದಿಯಲ್ಲೇ ಆತ ಕೊನೆಯುಸಿರೆಳೆದಿದ್ದ.