ಸುಮಾರು 200ಕೋಟಿ ರೂಪಾಯಿ ವೆಚ್ಚದಲ್ಲಿ ಬಿಎಸ್‌ಪಿ ಪಕ್ಷದ 25ನೇ ವರ್ಷದ ಸಂಭ್ರಮಾಚರಣೆಯ ಮಹಾ ಸಮ್ಮೇಳನ ಹಾಗೂ ನೋಟಿನ ಹಾರಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ವಜಾಗೊಳಿಸುವ ಮೂಲಕ ಮಾಯಾ ತಾತ್ಕಾಲಿಕವಾಗಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ.
ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ ಮಾಯಾವತಿಯವರು ಪಕ್ಷದ ಬೆಳ್ಳಿಹಬ್ಬಕ್ಕಾಗಿ ಸುಮಾರು 200ಕೋಟಿ ರೂ.ಗಳನ್ನು ವ್ಯಯಿಸಿ ಅದ್ದೂರಿ ಸಮ್ಮೇಳನ ನಡೆಸಿದ್ದಾರೆಂಬ ಆರೋಪ ಹಾಗೂ ಸಮಾರಂಭದಲ್ಲಿ ಸಾವಿರ ರೂಪಾಯಿ ನೋಟುಗಳ ಹಾರವನ್ನು ಹಾಕಿದ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಸ್ಥಳೀಯ ಮೂರು ಮಂದಿ ವಕೀಲರು ಹೈಕೋರ್ಟ್‌ಗೆ ಸಲ್ಲಿಸಿದ್ದ ಪಿಐಎಲ್ ಅನ್ನು ಮುಖ್ಯನ್ಯಾಯಮೂರ್ತಿ ಅಮಿತವ್ ಲಾಲಾ ಹಾಗೂ ನ್ಯಾ.ಅನಿಲ್ ಕುಮಾರ್ ಅವರಿದ್ದ ಪೀಠ ತಳ್ಳಿಹಾಕಿದೆ.
ಸುಮಾರು 175ಕೋಟಿ ರೂಪಾಯಿಯಷ್ಟು ಸಾರ್ವಜನಿಕರ ಹಣವನ್ನು ಮಹಾಸಮ್ಮೇಳನಕ್ಕೆ ವಿನಿಯೋಗಿಸಲಾಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿತ್ತು. ಅಲ್ಲದೇ, ಈ ಸಂದರ್ಭದಲ್ಲಿ ಮಾಯಾವತಿ ಅವರ ಕೊರಳಿಗೆ 25ಕೋಟಿ ರೂಪಾಯಿಗಳ ನೋಟಿನ ಹಾರವನ್ನೂ ಹಾಕಲಾಗಿತ್ತು ಎಂದು ದೂರಲಾಗಿತ್ತು.
ಮಾಯಾವತಿ ಕೊರಳಿಗೆ ನೋಟಿನ ಹಾರ ಹಾಕಿದ ಪ್ರಕರಣ ಸಂಸತ್ ಒಳಗೂ ಹಾಗೂ ಹೊರಗೂ ಸಾಕಷ್ಟು ಕೋಲಾಹಲಕ್ಕೆ ಎಡೆಮಾಡಿಕೊಟ್ಟಿತ್ತು. ನೋಟಿನ ಹಾರದ ಬಗ್ಗೆ ಸಮರ್ಥನೆ ನೀಡಿ ಹೇಳಿಕೆ ನೀಡಿದ್ದ ಕರ್ನಾಟಕದ ಬಿಎಸ್ಪಿ ವಕ್ತಾರ ವೈ.ಎನ್.ಶರ್ಮಾ ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಿತ್ತು.
ಪಕ್ಷದ ಬೆಳ್ಳಿಹಬ್ಬದ ಸಂಭ್ರಮದ ಸಂದರ್ಭದಲ್ಲಿ ನೋಟಿನ ಹಾರ ಹಾಕಿಕೊಂಡು ಟೀಕೆಗೆ ಒಳಗಾದ ನಂತರವೂ ಕೂಡ ಮಾಯಾವತಿ ಮತ್ತೆ ನೋಟಿನ ಮಾಲೆ ಹಾಕಿಸಿಕೊಂಡು ಎದುರಾಳಿಗಳಿಗೆ ಸಡ್ಡು ಹೊಡೆದಿದ್ದರು. ಎರಡನೇ ಬಾರಿ ಬಿಎಸ್ಪಿ ಮುಖಂಡರು ಒಟ್ಟು ಸೇರಿ ಪಕ್ಷದ ಸಭೆಯಲ್ಲಿ 18ಲಕ್ಷ ರೂಪಾಯಿ ವೆಚ್ಚದ ನೋಟಿನ ಮಾಲೆಯನ್ನು ಹಾಕಿದ್ದರು.
ತೀವ್ರ ವಿವಾದ ಹುಟ್ಟುಹಾಕಿರುವ ಮುಖ್ಯಮಂತ್ರಿ ಮಾಯಾ ಅವರ ಕೊರಳಿಗೆ ಹಾಕಿದ ನೋಟಿನ ಹಾರದ ಪ್ರಕರಣದ ಕುರಿತಂತೆ ಆದಾಯ ತೆರಿಗೆ(ಐಟಿ) ಇಲಾಖೆ ತನಿಖೆ ನಡೆಸುತ್ತಿದೆ.