ದೇಶದ ರಾಜಧಾನಿಯಲ್ಲಿ ನಡೆಯಲಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ಸಂದರ್ಭದಲ್ಲಿ ಗೋಮಾಂಸ ಸರಬರಾಜು ಮಾಡಲು ಯಾವುದೇ ಕಾರಣಕ್ಕೂ ಬಿಡಲ್ಲ, ಅದನ್ನು ತಡೆಯುವ ನಿಟ್ಟಿನಲ್ಲಿ ಕಾನೂನಿನ ಮೊರೆ ಹೋಗುವುದಾಗಿ ವಿಎಚ್‌ಪಿ ಮುಖಂಡ ಪ್ರವೀಣ್ ತೊಗಾಡಿಯಾ ಎಚ್ಚರಿಸಿದ್ದಾರೆ.
ತೊಗಾಡಿಯಾ ಅವರು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗೆ ಗೋಮಾಂಸ ಪೂರೈಸಲು ದೆಹಲಿ ಸರ್ಕಾರದ ಯೋಜನೆ ಹಮ್ಮಿಕೊಂಡಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಕಾಮನ್‌ವೆಲ್ತ್ ಗೇಮ್ಸ್ ಭಾರತದಲ್ಲಿ ನಡೆಯುತ್ತಿರುವುದು ತುಂಬಾ ಅಭಿಮಾನದ ಸಂಗತಿಯಾಗಿದೆ. ಆ ನಿಟ್ಟಿನಲ್ಲಿ ನಾವು ನಮ್ಮ ಪ್ರತಿಷ್ಠೆಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದ ಅವರು, ಏನೇ ಆದರು ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಆಗುವುದನ್ನು ಸಹಿಸಲಾರೆವು ಎಂದರು. ಹಾಗಾಗಿ ಗೋಮಾಂಸ ವಿತರಣೆಗೆ ಸಂಬಂಧಿಸಿದಂತೆ ಕಾನೂನು, ನ್ಯಾಯಾಂಗ ಹಾಗೂ ಪ್ರಜಾಸತ್ತಾತ್ಮಕ ದಾರಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ಹೇಳಿದರು.
ಸ್ವಾಮಿ ವಿರುದ್ಧ ಹಿಂದೂಗಳ ವಿರೋಧಿಗಳ ಸಂಚು: ಪರಮಹಂಸ ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ತೊಗಾಡಿಯಾ, ಇದು ಹಿಂದೂ ವಿರೋಧಿಗಳ ವ್ಯವಸ್ಥಿತ ಷಡ್ಯಂತ್ರ ಎಂದು ಕಿಡಿಕಾರಿದರು.
ಹಿಂದೂಗಳ ಮುಖಕ್ಕೆ ಮಸಿ ಬಳಿಯಲಿಕ್ಕಾಗಿಯೇ ನಿತ್ಯಾನಂದ ಸ್ವಾಮೀಜಿಯ ವಿರುದ್ಧ ರಾಸಲೀಲೆ ಆರೋಪ ಹಾಕಿ ಪ್ರಚಾರ ಮಾಡಲಾಗುತ್ತಿದೆ ಎಂದ ಅವರು, ಸ್ವಾಮಿ ರಾಸಲೀಲೆಯ ಸಿಡಿಯನ್ನು ಫೋರೆನ್ಸಿಕ್ ತಜ್ಞರಿಂದ ಪರಿಶೀಲನೆ ನಡೆಸದೆ ಮಾಧ್ಯಮಗಳು ಇದನ್ನು ಪ್ರಸಾರ ಮಾಡಬಾರದು ಎಂಬುದಾಗಿ ಹೇಳಿದರು.
ಈ ಮೊದಲು ಕೂಡ ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು, ನಿತ್ಯಾನಂದ ಸ್ವಾಮಿಯ ಪ್ರಕರಣದಲ್ಲಿಯೂ ಅನುಸರಿಸುವಂತೆ ತೊಗಾಡಿಯಾ ಮಾಧ್ಯಮಗಳಿಗೆ ಸಲಹೆ ನೀಡಿದರು.
ಒರಿಸ್ಸಾ ಸರ್ಕಾರದ ವಿರುದ್ಧ ವಾಗ್ದಾಳಿ: ಕೋಮು ಸೂಕ್ಷ್ಮಪ್ರದೇಶವಾದ ಕಂಧಮಾಲ್ ಜಿಲ್ಲೆಗೆ ಭೇಟಿ ನೀಡುವುದಕ್ಕೆ ಒರಿಸ್ಸಾ ಸರ್ಕಾರ ತಡೆಯೊಡ್ಡಿರುವುದಕ್ಕೆ ತೊಗಾಡಿಯಾ ಈ ಸಂದರ್ಭದಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ಪ್ರತಿ ಹಿಂದೂವಿಗೂ ಒರಿಸ್ಸಾ ಜಿಲ್ಲೆಗೆ ಭೇಟಿ ನೀಡುವ ಅವಕಾಶವಿದೆ ಎಂದರು.
ಯಾರು ಭಾರತೀಯ ಪ್ರಜೆಗಳು ಅಲ್ಲವೋ ಅಂತಹವರಿಗೆ(ಯುರೋಪಿಯನ್ ಯೂನಿಯನ್) ಒರಿಸ್ಸಾ ಸರ್ಕಾರ ಕಂಧಮಾಲ್ ಜಿಲ್ಲೆಗೆ ಭೇಟಿ ನೀಡಲು ಅವಕಾಶ ನೀಡುತ್ತೆ. ಆದರೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಭಾರತೀಯ ಪ್ರಜೆಗಿಂತ ಯುರೋಪ್ ವ್ಯಕ್ತಿಗಳ ಮೇಲೆ ಹೆಚ್ಚಿನ ವಿಶ್ವಾಸವಿರಿಸಿ ಭೇಟಿಗೆ ಅವಕಾಶ ನೀಡುತ್ತಾರೆ ಎಂದು ಕಿಡಿಕಾರಿದರು.