ಬರೇಲಿ (ಉ.ಪ್ರ.), ಸೋಮವಾರ, 22 ಮಾರ್ಚ್ 2010( 18:06 IST )
ಇತ್ತೀಚೆಗೆ ನಡೆದ ದೊಂಬಿ-ಗಲಭೆಗಳು ಬರೇಲಿಯನ್ನು ಶಾಂತಿಗಾಗಿ ಹಪಹಪಿಸುವಂತೆ ಮಾಡಿದ್ದರೆ, ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಈ ಪುಟ್ಟ ಪಟ್ಟಣವು ಅಪರೂಪದ ಕೋಮು ಸೌಹಾರ್ದತೆಯ ಕ್ಷಣಗಳನ್ನು ಕಂಡಿದೆ. ಹಾನಿಗೀಡಾದ ಮಂದಿರ ಕಟ್ಟಿಸಲು ಮುಸಲ್ಮಾನರು ಸಹಕರಿಸುತ್ತಿದ್ದರೆ, ಹಿಂದುಗಳು ಮಜರ್ (ಗೋರಿ) ಒಂದರ ಪುನರ್ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಬರೇಲಿಯಿಂದ ಸುಮಾರು 250 ಕಿ.ಮೀ. ದೂರದಲ್ಲಿರುವ ಕೋಹದ್‌ಪೀರ್ ಎಂಬಲ್ಲಿನ ಬಜರಂಗಿ ಮಂದಿರ ಎಂದೇ ಜನಪ್ರಿಯವಾಗಿರುವ ಹನುಮಾನ್ ದೇವಸ್ಥಾನ ಮತ್ತು ಪೀರ್ ಭಾಯಿ ಮೀರ್ ಜಾಫರ್ ಅಲಿಯವರ ಸಮಾಧಿ - ಇವೆರಡೂ ಮಾರ್ಚ್ 2ರಂದು ಸಂಭವಿಸಿದ್ದ ಕೋಮು ಗಲಭೆಯಲ್ಲಿ ತೀವ್ರವಾಗಿ ಹಾನಿಗೀಡಾಗಿದ್ದವು.
ಹಿಂದುಗಳು ಮಜರ್ ಹಾಗೂ ಮುಸ್ಲಿಮರು ದೇವಾಲಯದ ಮರುನಿರ್ಮಾಣಕ್ಕೆ ಮುಂದಾಗಿರುವುದರೊಂದಿಗೆ, ಹಿಂದೂ-ಮುಸ್ಲಿಂ ಮಧ್ಯೆ ಸ್ವಂತ ಲಾಭಕ್ಕಾಗಿ ವಿಷದ ಬೀಜ ಬಿತ್ತುವ ರಾಜಕಾರಣಿಗಳಿಗೆ, ಜಾತ್ಯತೀತತೆ ಹೆಸರಿನಲ್ಲಿ ಕೋಮುದ್ವೇಷ ಹಬ್ಬಿಸುವವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಅಲ್ಲಿನ ನಿವಾಸಿ ವಿಕಾಸ್ ಶರ್ಮಾ ಎಂಬವರು ಹೇಳುತ್ತಾರೆ.
'ನಮ್ಮ ಪ್ರಕಾರ ಎರಡೂ ಧಾರ್ಮಿಕ ಕೇಂದ್ರಗಳನ್ನು ಹಾಳುಗೆಡವಿದವರು ಖಂಡಿತವಾಗಿಯೂ ಯಾವುದೇ ಧರ್ಮದ ಅನುಯಾಯಿಗಳಾಗಿರಲು ಸಾಧ್ಯವಿಲ್ಲ. ಅವರೆಲ್ಲ ಹಿಂದುತ್ವ ಅಥವಾ ಇಸ್ಲಾಂಗೆ ಸಂಬಂಧವೇ ಇಲ್ಲದ ಸಮಾಜ-ವಿರೋಧಿ ಶಕ್ತಿಗಳು' ಎಂದು ಆಂಗ್ಲ ಉಪನ್ಯಾಸಕರಾಗಿರುವ ಶರ್ಮಾ ಹೇಳಿದ್ದಾರೆ.
ಕೋಹದ್‌ಪೀರ್ ಎಂಬುದು ಮುಸ್ಲಿಮರೇ ಹೆಚ್ಚಿರುವ ತಾಣವಾಗಿದ್ದು, ಸುಮಾರು 3000 ಮತದಾರರಿದ್ದಾರೆ. ಕೋಮು ಹಿಂಸಾಚಾರದ ಸಂದರ್ಭ ಅದೆಷ್ಟೋ ಅಂಗಡಿಗಳು ಇಲ್ಲಿ ಸುಟ್ಟು ಭಸ್ಮವಾಗಿದ್ದವು. ಸ್ಥಳೀಯ ನಿವಾಸಿಗಳೇ ಚಂದಾ ಎತ್ತಿ ಎರಡೂ ಧಾರ್ಮಿಕ ಸ್ಥಳಗಳನ್ನು ಪುನರುತ್ಥಾನ ಮಾಡುತ್ತಿದ್ದಾರೆ.
ಸ್ಥಳೀಯ ಹಿರಿಯರ ಮಧ್ಯೆ ಮಾತುಕತೆ ನಡೆಯುತ್ತಿದ್ದ ಸಂದರ್ಭ ಈ ಒಂದು ಯೋಚನೆ ಹುಟ್ಟಿಕೊಂಡಿತ್ತು. ಕರ್ಫ್ಯೂ ಸಡಿಲಿಸಿದ ಬಳಿಕ ಉಭಯ ಸಮುದಾಯಗಳ ಹಿರಿಯರು ಧಾಬಾವೊಂದರಲ್ಲಿ ಸೇರಿ, ತಮ್ಮ ನೋವಿನ ಅನುಭವಗಳನ್ನು ಹಂಚಿಕೊಂಡರು. ಹಾನಿಗೀಡಾದ ಧಾರ್ಮಿಕ ಸ್ಥಳಗಳನ್ನು ಸರಿಪಡಿಸುವುದಾಗಿ ಜಿಲ್ಲಾಡಳಿತವು ಘೋಷಿಸಿದಾಗ, ನಾವೇ ಏಕೆ ಚಂದಾ ಎತ್ತಿ ಇದನ್ನು ದುರಸ್ತಿ ಮಾಡಬಾರದು ಎಂದು ಯೋಚಿಸಿದೆವು ಎಂದಿದ್ದಾರೆ ಆಭರಣ ವ್ಯಾಪಾರಿ ಅಫ್ರೋಜ್ ಖಾನ್.
ಶ್ರೀಮಂತರು ಮಾತ್ರವೇ ಅಲ್ಲದೆ, ಸಣ್ಣ ಪುಟ್ಟ ವ್ಯಾಪಾರಿಗಳು, ಬೀದಿ ಬದಿ ಮಾರಾಟಗಾರರು, ದಿನಗೂಲಿ ನೌಕರರು ಎಲ್ಲರು ಕೂಡ ಕೈಜೋಡಿಸಿದರು. ಮಂದಿರ-ಸಮಾಧಿ ಪುನರುತ್ಥಾನ ಕಾರ್ಯವು ಇನ್ನೆರಡು ದಿನಗಳಲ್ಲೇ ಪೂರ್ಣಗೊಳ್ಳಲಿದೆ.
ಬರೇಲಿ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಇನ್ನೂ ಮುಂದುವರಿದಿದ್ದರೂ, ವಾಹನಗಳಿಗೆ ಸಂಬಂಧಿಸಿದ ಎಲ್ಲ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಮಾರ್ಚ್ 2ರಂದು ಬಾರಾವಫಾತ್ ಮೆರವಣಿಗೆ ಸಂದರ್ಭ ಕಲ್ಲು ತೂರಾಟ ನಡೆದು ಕೋಮು ದಳ್ಳುರಿ ಹಬ್ಬಿಕೊಂಡಿತ್ತು. ಇದುವರೆಗೆ 400ರಷ್ಟು ಮಂದಿಯನ್ನು ಗಲಭೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ.