ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಮನ್ಸ್ ಕಳುಹಿಸಿಯೇ ಇಲ್ಲ, ಇವೆಲ್ಲ ಅಪಪ್ರಚಾರ: ಮೋದಿ (Gujarat | CM Narendra Modi | Summons | Godhra Voilence | SIT | Supreme Court)
Bookmark and Share Feedback Print
 
PTI
ಗೋಧ್ರಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ತನಿಖಾ ಸಮಿತಿಯೆದುರು ಮಾರ್ಚ್ 21ರಂದು ಹಾಜರಾಗುವಂತೆ ತನಗೆ ಸಮನ್ಸ್ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಇದೊಂದು ಪಿತೂರಿಯ ಅಪಪ್ರಚಾರವಾಗಿದ್ದು, ಇಂಥ ಸುಳ್ಳುಗಳನ್ನು ಯಾರು ಹಬ್ಬಿಸುತ್ತಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕಿದೆ ಎಂದಿದ್ದಾರೆ.

ರಜಾದಿನದಂದು ಸಮನ್ಸ್?
ತಮ್ಮ ಹಾಜರಾತಿಗಾಗಿ ವಿಶೇಷ ತನಿಖಾ ಸಮಿತಿಯನ್ನು ಕಾಯಿಸಿದರು ಎಂಬ ಕುರಿತಾದ ವರದಿ ಪ್ರಕಟವಾದ ಮರುದಿನವಾದ ಸೋಮವಾರ ತೀಕ್ಷ್ಣ ಹೇಳಿಕೆ ನೀಡಿರುವ ಮೋದಿ, "ಇದು ಕಳವಳಕಾರಿ ಸಂಗತಿ. ನರೇಂದ್ರ ಮೋದಿಗೆ ವಿಶೇಷ ತನಿಖಾ ತಂಡವು (ಎಸ್ಐಟಿ) ಮಾ.21ರಂದು ಹಾಜರಾಗಲು ಸಮನ್ಸ್ ಕಳುಹಿಸಿದೆ ಎಂಬ ಸುಳ್ಳುಗಳನ್ನು ಯಾರು ಮತ್ತು ಯಾಕೆ ಹಬ್ಬಿಸುತ್ತಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕಿದೆ" ಎಂದಿದ್ದಾರೆ.

ಮಾರ್ಚ್ 21 ಎಂಬುದು ಭಾನುವಾರ ಮತ್ತು ರಜಾದಿನವೂ ಹೌದು. ಈ ಗಾಳಿಸುದ್ದಿಕೋರರು, ಸುಪ್ರೀಂ ಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡವು ಮಾರ್ಚ್ 21ರಂದು ಗುಜರಾತಿನಲ್ಲಿ ಇರುತ್ತದೆಯೇ ಇಲ್ಲವೇ ಎಂಬ ಬಗ್ಗೆ ಯೋಚಿಸುವ ಗೋಜಿಗೂ ಹೋಗಿಲ್ಲ ಎಂದಿರುವ ಮೋದಿ, ತನಗೆ ಭಾರತದ ಕಾನೂನಿನ ಬಗ್ಗೆ, ಪರಮೋಚ್ಚ ನ್ಯಾಯಾಲಯವು ನೇಮಿಸಿರುವ ತನಿಖಾ ತಂಡದ ಮೇಲೆ ಸಂಪೂರ್ಣ ಗೌರವವಿದೆ ಎಂದಿದ್ದಾರೆ.

ಬಿಜೆಪಿ ಟೀಕೆ: ಮೋದಿಯನ್ನು ಬೆಂಬಲಿಸಿರುವ ಬಿಜೆಪಿ ಕೂಡ, ಮಾರ್ಚ್ 21ರಂದು ಮೋದಿ ಹಾಜರಾಗುವ ದಿನ ಎಂದು ಯಾರೋ ಸಂಶೋಧಿಸಿದ್ದಾರೆ ಎಂದು ಟೀಕಿಸಿದೆ. "ದಿನಾಂಕದ ಕುರಿತ ಸುಳ್ಳಿನ ಆಧಾರದಲ್ಲಿ ಇಡೀ ದೇಶದ ಹಾದಿ ತಪ್ಪಿಸಲಾಗಿದೆ. ಮೋದಿ ಅವರು ನಿಗದಿತ ಸಮಯದಲ್ಲಿ ಖಂಡಿತವಾಗಿ ತನಿಖಾ ಸಮಿತಿಯೆದುರು ಹಾಜರಾಗುತ್ತಾರೆ" ಎಂದು ಹಿರಿಯ ಮುಖಂಡ ಅರುಣ್ ಜೇಟ್ಲಿ ಹೇಳಿದ್ದಾರೆ.

ಗೋಧ್ರಾ ಗಲಭೆ ಸಂದರ್ಭದ 9 ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ವಿಶೇಷ ತನಿಖಾ ತಂಡವನ್ನು ನೇಮಿಸಲಾಗಿತ್ತು. ಅಹಮದಾಬಾದಿನ ಗುಲ್ಬರ್ಗ್ ಸೊಸೈಟಿಯಲ್ಲಿ ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಜೀವಂತ ದಹನ ಪ್ರಕರಣಕ್ಕೆ ಸಂಬಂಧಿ ವಿಚಾರಣೆಗೆ ಹಾಜರಾಗುವಂತೆ ಮೋದಿ ಅವರಿಗೆ ಸಮನ್ಸ್ ಕಳುಹಿಸಲಾಗಿತ್ತು ಎಂದು ಭಾನುವಾರ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ, ನರೇಂದ್ರ ಮೋದಿಗೆ ನೆಲದ ಕಾನೂನಿನ ಮೇಲೆ ಒಂದಿನಿತೂ ಗೌರವವಿಲ್ಲ ಎಂದು ಕಾಂಗ್ರೆಸ್ ಪಕ್ಷವು ಗುಲ್ಲೆಬ್ಬಿಸಿತ್ತು.

"ಸತ್ಯವನ್ನೆಂದಿಗೂ ಮುಚ್ಚಿಡುವುದು ಸಾಧ್ಯವಿಲ್ಲ. ನಿಜಕ್ಕೂ ಸತ್ಯ ಎಂದರೇನು ಎಂಬುದನ್ನು ಅರಿತುಕೊಳ್ಳಬೇಕಿರುವ ಮಹತ್ವವನ್ನು ಮುಂದಿಡಲು ಸತ್ಯಾಂಶವನ್ನು ನಿಮ್ಮ ಮುಂದಿಡುವುದು ನನ್ನ ಕರ್ತವ್ಯ" ಎಂದು ಮೋದಿ ರಾಜ್ಯದ ಜನತೆಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.

ಗುಜರಾತ್ ಹೆಸರಿಗೆ ಮಸಿ ಬಳಿಯುವ ವ್ಯವಸ್ಥಿತ ಪಿತೂರಿ
2002ರ ಗಲಭೆಯ ನಂತರ, ವಿಧಾನಸೌಧದಲ್ಲಿ ಮತ್ತು ಬಹಿರಂಗ ಸಭೆಗಳಲ್ಲಿ ಹಲವಾರು ಬಾರಿ ಹೇಳಿದ್ದೇನೆ. ಯಾರು ಕೂಡ, ಯಾವ ರಾಜ್ಯದ ಮುಖ್ಯಮಂತ್ರಿ ಕೂಡ ಭಾರತದ ಸಂವಿಧಾನಕ್ಕಿಂತ ಮೇಲೆ ಅಲ್ಲ. ಇವುಗಳು ಕೇವಲ ಮಾತುಗಳಲ್ಲ. ನಾನು ಇದುವರೆಗೆ ಮಾಡಿದ್ದೆಲ್ಲವೂ ನನ್ನ ಈ ಹೇಳಿಕೆಯನ್ನೇ ಬಿಂಬಿಸಿವೆ. ಭವಿಷ್ಯದಲ್ಲಿಯೂ ಇದೇ ನನ್ನ ನಿಲುವು ಎಂದು ನಿಮಗೆ ಭರವಸೆ ನೀಡುತ್ತಿದ್ದೇನೆ ಎಂದು ಮೋದಿ ವಿವರಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ, ಮಾಧ್ಯಮದ ಒಂದು ವಿಭಾಗವು ಅಪಪ್ರಚಾರ ಆಂದೋಲನದಲ್ಲಿ ತೊಡಗಿ, ಗಾಳಿಸುದ್ದಿಕೋರರ ಕೈಗೊಂಬೆಯಾಗಿ ವರ್ತಿಸಿದವು. 2002ರಿಂದೀಚೆಗೆ ಗುಜರಾತ್ ಹೆಸರಿಗೆ ಮಸಿ ಬಳಿಯುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಮೋದಿ ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ