ಬೆತುಲ್ (ಮ.ಪ್ರ.), ಮಂಗಳವಾರ, 23 ಮಾರ್ಚ್ 2010( 11:33 IST )
ಕಾರ್ಮಿಕಳಾಗಿ ದುಡಿಯುತ್ತಿದ್ದ 18ರ ಹರೆಯದ ತರುಣಿಯೊಬ್ಬಳು ಅತ್ಯಾಚಾರ ಪ್ರಯತ್ನಕ್ಕೆ ತಡೆಯೊಡ್ಡಿದ್ದರಿಂದ ಆಕ್ರೋಶಗೊಂಡ ಆರೋಪಿಯು, ಆಕೆಗೆ ಬೆಂಕಿ ಹಚ್ಚಿದ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಹಮಲ್ಪುರದಿಂದ ವರದಿಯಾಗಿದೆ.
ಶೇ.60 ಸುಟ್ಟಗಾಯಗಳೊಂದಿಗೆ ಈ ತರುಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹುಡುಗಿ ತನ್ನ ಚಿಕ್ಕಮ್ಮನ ಮನೆಯ ಹೊರಗಿದ್ದಾಗ, ಗೋರಾ ಗೊಂಡ್ ಎಂಬ ಆರೋಪಿಯು ಸಮೀಪಿಸಿ, ಆಕೆಯನ್ನು ಸಮೀಪದ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಲು ಯತ್ನಿಸಿದ. ಆದರೆ ಆಕೆ ಪ್ರತಿಭಟಿಸಿದಾಗ, ಅವಳ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಗೋರಾ ಅಲ್ಲಿಂದ ಓಡಿ ಹೋದ ಎಂದು ಪೊಲೀಸರು ವಿವರಿಸಿದ್ದಾರೆ.
ಸ್ಥಳೀಯರು ಈ ಹುಡುಗಿಯನ್ನು ಆಸ್ಪತ್ರೆಗೆ ಸೇರಿಸಿದ್ದು, ಆಕೆಯ ಪರಿಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. ಎರಡು ದಿನಗಳಿಂದ ಗೋರಾ ತನ್ನನ್ನು ನಿರಂತರವಾಗಿ ಕಾಡುತ್ತಿದ್ದ, ಭಾನುವಾರ ರಾತ್ರಿ ತನ್ನನ್ನು ಬಲವಂತವಾಗಿ ಹೊಲಕ್ಕೆ ಕರೆದೊಯ್ದು ಅತ್ಯಾಚಾರಕ್ಕೆಳಸಿದ ಎಂದು ಹುಡುಗಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ತಲೆಮರೆಸಿಕೊಂಡಿರುವ ಗೋರಾನಿಗಾಗಿ ಶೋಧ ನಡೆಯುತ್ತಿದೆ.