ಆಧುನಿಕ ಯುಗದ ನಕ್ಸಲರು ದೇಶದ ಉತ್ತರ ಭಾಗದಲ್ಲಿ ಹಿಂಸಾಚಾರದ ಮೂಲಕ ಹಾಹಾಕಾರ ಎಬ್ಬಿಸುತ್ತಿರುವಂತೆಯೇ, ದೇಶದಲ್ಲಿ ನಕ್ಸಲ್ ಚಳವಳಿಯ ಜನಕರಲ್ಲೊಬ್ಬರಾದ ಕಾನು ಸನ್ಯಾಲ್ (78) ಪಶ್ಚಿಮ ಬಂಗಾಳದ ತಮ್ಮ ಸ್ವಗ್ರಾಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದರೊಂದಿಗೆ, ದೇಶದ ನಕ್ಸಲ್ ಆಂದೋಲನಕ್ಕೆ ಹಿನ್ನಡೆಯಾಗಿದೆ.
ಸಿಲಿಗುರಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಸೆಫ್ತುಲ್ಲಾಜೋತ್ ಗ್ರಾಮದ ತಮ್ಮ ಮನೆಯಲ್ಲಿ ಮಂಗಳವಾರ ಅವರ ಶವ ನೇತಾಡುತ್ತಿತ್ತು. ಅವಿವಾಹಿತರಾಗಿದ್ದ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ಕಾನು ಸನ್ಯಾಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ುತ್ತರ ಬಂಗಾಳದ ಐಜಿಪಿ ಕೆ.ಎಲ್.ತಮ್ತಾ ತಿಳಿಸಿದ್ದಾರೆ.
ಸನ್ಯಾಲ್ ಅವರು 1969ರಲ್ಲಿ ರಚನೆಯಾಗಿದ್ದ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ-ಲೆನಿನ್‌ವಾದಿ [ಸಿಪಿಐ-ಎಂಎಲ್])ನ ಸ್ಥಾಪಕರಲ್ಲಿ ಒಬ್ಬರಾಗಿದ್ದರು.
ಉತ್ತರ ಬಂಗಾಳದ ನಕ್ಸಲ್‌ಬಾರಿ ಎಂಬಲ್ಲಿ 1967ರ ಮೇ 25ರಂದು ನಕ್ಸಲೀಯ ಆಂದೋಲನ ಆರಂಭವಾಗಿತ್ತು. ಅಂದು ಚಾರು ಮುಜುಮ್ದಾರ್ ಮತ್ತು ಸನ್ಯಾಲ್ ಅವರು ಈ ಆಂದೋಲನದ ನೇತೃತ್ವ ವಹಿಸಿದ್ದರು. ಅಂದು ಆರಂಭವಾಗಿದ್ದ ನಕ್ಸಲೀಯ ಆಂದೋಲನ ಇಂದು ಭಯೋತ್ಪಾದನೆಯ ರೂಪ ತಳೆದು, ದೇಶದ ಅರ್ಥ ವ್ಯವಸ್ಥೆಗೆ, ದೇಶದ ಆಂತರಿಕ ರಕ್ಷಣಾ ವ್ಯವಸ್ಥೆಗೇ ಸವಾಲೊಡ್ಡುತ್ತಿದೆ.