ಉತ್ತರ ಪ್ರದೇಶದ ರಾಜಕೀಯದಲ್ಲಿ ಇದೀಗ ಪ್ರತಿಮೆ ಅನಾವರಣದ ಜಂಗಿ ಕುಸ್ತಿ ಆರಂಭಗೊಂಡಿದೆ. ಮುಖ್ಯಮಂತ್ರಿ ಮಾಯಾವತಿ ಅವರು ಪ್ರತಿಮೆ ಅನಾವರಣಗೊಳಿಸಲು ಮುಂದಾದಾಗ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ವಿರೋಧಿಸಿದ್ದರು. ಆದರೆ ಸೇಡಿಗೆ ಸೇಡು ಎಂಬಂತೆ ರಾಮಮನೋಹರ್ ಲೋಹಿಯಾ ಪ್ರತಿಮೆ ಅನಾವರಣಕ್ಕೆ ಮುಂದಾದ ಮುಲಾಯಂಗೆ ತಡೆಯೊಡ್ಡುವ ಮೂಲಕ ಮತ್ತೊಂದು ಸಮರಕ್ಕೆ ನಾಂದಿ ಹಾಡಿದೆ.
ಲಕ್ನೋದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಖ್ಯಾತ ಸಮಾಜವಾದಿ ದಿ.ರಾಮಮನೋಹರ್ ಲೋಹಿಯಾ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ಮುಲಾಯಂ ಆಗಮಿಸಿದ್ದ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆ ಹಿಡಿದು ಎಳೆದಾಡಿರುವುದಾಗಿ ಮೂಲವೊಂದು ಆರೋಪಿಸಿದೆ.
ನಿಗದಿತ ಕಾರ್ಯಕ್ರಮದಂತೆ ಲೋಹಿಯಾ ಅವರ ಪ್ರತಿಮೆ ಅನಾವರಣಕ್ಕೆ ಮುಲಾಯಂ ಮುಂದಾದಾಗ ಪೊಲೀಸರು ತಡೆಯೊಡ್ಡಿರುವುದು ಮುಲಾಯಂ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಹೂ ಮಾಲೆ ಹಾಕಿ ಪ್ರತಿಮೆ ಅನಾವರಣ ಮಾಡಲು ಪೊಲೀಸರು ಅವಕಾಶ ನೀಡದೆ, ತನ್ನನ್ನೇ ಹಿಡಿದು ಜಗ್ಗಾಡಿರುವುದಾಗಿ ಕಿಡಿಕಾರಿದ್ದಾರೆ.
ಇದು ಮುಖ್ಯಮಂತ್ರಿ ಮಾಯಾವತಿ ಅವರ ದುರುದ್ದೇಶದ ಕ್ರಮವಾಗಿದೆ ಎಂದು ಆರೋಪಿಸಿರುವ ಅವರು, ಏನಾದ್ರೂ ಮಾಡಿ ಲೋಹಿಯಾ ಪ್ರತಿಮೆ ಅನಾವರಣ ಮಾಡದಂತೆ ತನ್ನನ್ನು ತಡೆಯುವುದೇ ಮಾಯಾ ಅವರು ಉದ್ದೇಶವಾಗಿದೆ ಎಂದು ಮುಲಾಯಂ ದೂರಿದ್ದಾರೆ.
ಏತನ್ಮಧ್ಯೆ, ಸರ್ಕಾರಿ ಸ್ವಾಮಿತ್ವದ ಭೂಮಿಯಲ್ಲಿ ಮುಲಾಯಂ ಸಿಂಗ್ ಯಾದವ್ ಅವರು ಪ್ರತಿಮೆ ಅನಾವರಣ ಮಾಡಲು ಯತ್ನಿಸಿದ್ದಾರೆಂದು ಜಿಲ್ಲಾಡಳಿತ ಸಮಜಾಯಿಷಿ ನೀಡಿದೆ. ಅಲ್ಲದೇ ಪ್ರತಿಮೆ ಅನಾವರಣ ಮಾಡಲು ರಾಜ್ಯ ಸರ್ಕಾರ ಸಮಾಜವಾದಿ ಪಕ್ಷಕ್ಕೆ ಯಾವುದೇ ಒಪ್ಪಿಗೆ ನೀಡಿರಲಿಲ್ಲವಾಗಿತ್ತು ಎಂದು ತಿಳಿಸಿದೆ.
ಮುಖ್ಯಮಂತ್ರಿ ಮಾಯಾವತಿ ತನ್ನದೇ ಆರು ಸೇರಿದಂತೆ ಒಟ್ಟು 40ಪ್ರತಿಮೆಗಳನ್ನು ರಾಜ್ಯದ ವಿವಿಧೆಡೆ ಜುಲೈ 3ರಂದು ಅನಾವರಣಗೊಳಿಸಲು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತಲ್ಲದೇ, ಸಮಾಜವಾದಿ ಪಕ್ಷ ಸೇರಿದಂತೆ ಹಲವಾರು ಮಾಯಾ ನಿರ್ಧಾರ ಖಂಡಿಸಿ ತೀವ್ರ ವಾಗ್ದಾಳಿ ನಡೆಸಿದ್ದರು. ಇವೆಲ್ಲ ವಿವಾದದ ನಡುವೆಯೂ ಮಾಯಾವತಿ ನಿಗದಿತ ಅವಧಿಗೂ ಮುನ್ನ ರಾತ್ರೋರಾತ್ರಿ 15ಪ್ರತಿಮೆಗಳನ್ನು ಅನಾವರಣಗೊಳಿಸಿ ವಿರೋಧಿಸುವವರ ವಿರುದ್ಧವೇ ಸೆಡ್ಡು ಹೊಡೆದಿದ್ದರು.