ನಗರದ ಜನನಿಭಿಡ ಪಾರ್ಕ್ ಸ್ಟ್ರೀಟ್‌ನಲ್ಲಿರುವ ಶತಮಾನದಷ್ಟು ಹಳೆಯದಾದ ಬಹುಮಹಡಿ ಕಟ್ಟಡವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಐವರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಬೃಹತ್ ಆಗಿ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಡುತ್ತಿವೆ.
ಕಟ್ಟಡದೊಳಗೆ ಬೆಂಕಿಯ ಕೆನ್ನಾಲಗೆಯನ್ನು ನಂದಿಸಲು 40 ಅಗ್ನಿಶಾಮಕ ವಾಹನಗಳು ಹಾಗೂ 300ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಕಟ್ಟಡದ 5ಮತ್ತು 6ನೇ ಮಹಡಿಯ ಲಿಫ್ಟ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಟ್ಟಡವನ್ನೇ ಆವರಿಸಿಕೊಂಡಿದ್ದು, ಇದು ನಗರದಲ್ಲಿ ನಡೆದ ಅತ್ಯಂತ ಭೀಕರ ಅಗ್ನಿ ಆಕಸ್ಮಿಕ ಘಟನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಪ್ರಾಥಮಿಕ ವರದಿಯ ಆಧಾರದ ಮೇಲೆ ಐವರು ಸಾವನ್ನಪ್ಪಿದ್ದು, ಈ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆಯಲ್ಲಿ ಹಲವರನ್ನು ರಕ್ಷಿಸಲಾಗಿದ್ದು, ಅವರನ್ನೆಲ್ಲಾ ಸ್ಥಳೀಯ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಕಟ್ಟಡದೊಳಗೆ ಸಿಲುಕಿಕೊಂಡವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಸಹಾಯಕ ಆಯುಕ್ತ ಜಾವೇದ್ ಶಾಮಿನ್ ತಿಳಿಸಿದ್ದಾರೆ.
ಇಡೀ ಕಟ್ಟಡದೊಳಗೆ ದಟ್ಟವಾದ ಹೊಗೆ ತುಂಬಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆಗೆ ಸ್ವಲ್ಪ ತೊಡಕಾಗಿದೆ. ಆದರೂ ಒಳಗೆ ಸಿಲುಕಿಕೊಂಡವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಹೇಳಿದ್ದಾರೆ.