ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಾರ್ಚ್ 27 ರಂದು, ಗೋದ್ರಾ ಕೋಮಗಲಭೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದೆದುರು ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರದ ಅವದಿಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಮಾರ್ಚ್ 21 ರಂದು ಹಾಜರಾಗಲಿದ್ದಾರೆ ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥರು ಹೇಳಿಕೆ ನೀಡಿದ್ದರು. ಆದರೆ ಮಾರ್ಚ್ 21 ಹಾಜರಾಗುವಂತೆ ತಮಗೆ ಸಮನ್ಸ್ ಜಾರಿಯಾಗಿಲ್ಲ ಎಂದು ಮೋದಿ ತಿರುಗೇಟು ನೀಡಿದ್ದರು.
ಮೂಲಗಳ ಪ್ರಕಾರ ಮಾರ್ಚ್ 27 ರಂದು ನರೇಂದ್ರ ಮೋದಿ ತನಿಖಾ ತಂಡದ ಮುಂದೆ ಹಾಜರಾಗಲಿದ್ದಾರೆ.ವಿಶೇಷ ತನಿಖಾ ತಂಡ ಹಾಗೂ ಮೋದಿಯವರ ಮಧ್ಯೆ ದಿನಾಂಕ ನಿಗದಿಯಾಗಿದ್ದರಿಂದ ನಾನು ಹೇಳಿಕೆ ನೀಡಲು ಬಯಸುವುದಿಲ್ಲ ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥ ಆರ್.ಕೆ ರಾಘವನ್ ತಿಳಿಸಿದ್ದಾರೆ.
ಗೋದ್ರಾ ಕೋಮಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಎಹ್ಸಾನ್ ಜಾಪ್ರಿ ಹತ್ಯೆ ಕುರಿತಂತೆ, ಅವರ ಪತ್ನಿ ಝಾಕಿಯಾ ಜಾಫ್ರಿ ಗುಜರಾತ್ ಮುಖ್ಯಮಂತ್ರಿ ಮೋದಿ ಹಾಗೂ ಇತರ 69 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರಿಂದ, ಎಸ್‌ಐಟಿ ತಂಡ ಮೋದಿಯವರಿಗೆ ಸಮನ್ಸ್ ಜಾರಿ ಮಾಡಿ, ತಂಡದ ಮುಂದೆ ಹಾಜರಾಗುವಂತೆ ಆದೇಶಿಸಿತ್ತು.