ವಿವಾಹ ಪೂರ್ವ ಲೈಂಗಿಕ ಸಂಬಂಧ (ಲಿವಿಂಗ್ ಟುಗೆದರ್) ಅಪರಾಧವಲ್ಲ ಎಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ವಿವಾಹವಾಗದೇ ಜೊತೆಯಲ್ಲಿರುವುದು ಕೂಡ ತಪ್ಪೇನಲ್ಲ ಎಂದು ಹೇಳಿದೆ.
'ಯಾವಾಗ ಇಬ್ಬರು ಪ್ರಾಪ್ತ ವಯಸ್ಸಿನ ಗಂಡು-ಹೆಣ್ಣು ಒಟ್ಟಿಗೆ ಬದುಕುತ್ತೇವೆ ಎನ್ನುವುದರಲ್ಲಿ ಯಾವ ಅಪರಾಧವಿದೆ. ಇದನ್ನು ಅಪರಾಧ ಎನ್ನುತ್ತೀರಾ? ವಿವಾಹವಿಲ್ಲದೇ ಜೊತೆಯಾಗಿರುವುದು ಅಪರಾಧವಲ್ಲ' ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ತ್ರಿಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಶ್ರೀಕೃಷ್ಣ ಪರಮಾತ್ಮ ಹಾಗೂ ರಾಧೆ ಜೊತೆಯಾಗಿರುವುದು ಸಹ ಪುರಾಣ ಕಥೆಗಳಲ್ಲಿ ಇರುವುದಾಗಿಯೂ ಸುಪ್ರೀಂ ಪೀಠ ಉದಾಹರಣೆ ಸಹಿತ ವಿವರಿಸಿದೆ. ವಿವಾಹವಿಲ್ಲದೇ ಜೊತೆಯಾಗಿರುವುದಕ್ಕಾಗಲಿ ಅಥವಾ ವಿವಾಹ ಪೂರ್ವ ಲೈಂಗಿಕತೆಯನ್ನು ನಿಷೇಧಿಸುವ ಯಾವ ಕಾನೂನು ಇಲ್ಲ ಎಂದು ಹೇಳಿದೆ.
ಅರ್ಜಿಯ ವಿಚಾರಣೆಯೊಂದನ್ನು ನಡೆಸಿದ ಸುಪ್ರೀಂಕೋರ್ಟ್ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. 2005ರಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬು ಸಂದರ್ಶನವೊಂದರಲ್ಲಿ ವಿವಾಹಪೂರ್ವ ಲೈಂಗಿಕತೆ ತಪ್ಪೇನಲ್ಲ ಎಂಬ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹೇಳಿಕೆ ವಿರುದ್ಧ ಸುಮಾರು 22ಮೊಕದ್ದಮೆಗಳು ದಾಖಲಾಗಿದ್ದು, ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ ಕಟಕಟೆಯಲ್ಲಿದ್ದು ಅಂತಿಮ ತೀರ್ಪನ್ನು ಕಾಯ್ದಿರಿಸಿತ್ತು.
ವಿವಾಹಪೂರ್ವ ಸಂಬಂಧ ತಪ್ಪೇನಲ್ಲ ಎಂಬ ಹೇಳಿಕೆ ಯುವ ಪೀಳಿಗೆ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಇದು ದೇಶದ ಸಂಪ್ರದಾಯಕ್ಕೂ ತಕ್ಕುದಾದಲ್ಲ ಎಂಬ ವಕೀಲರ ಹೇಳಿಕೆಗೂ ಕೂಡ ನ್ಯಾಯಪೀಠ ಆಕ್ಷೇಪ ವ್ಯಕ್ತಪಡಿಸಿತ್ತು. ಹಾಗಾದರೆ ಹೇಳಿ ಯಾವುದು ಅಪರಾಧ ಮತ್ತು ಯಾವ ಕಾಯ್ದೆಯಡಿ ಇದು ಅಪರಾಧ ಎನಿಸಿಕೊಳ್ಳುತ್ತದೆ ಎಂಬುದನ್ನು ವಿವರಿಸಿ ಎಂದು ತರಾಟೆಗೆ ತೆಗೆದುಕೊಂಡಿದೆ.
ಲಿವಿಂಗ್ ಟುಗೆದರ್ ಎನ್ನುವುದು ಜೀವನದ ಬದುಕುವ ಹಕ್ಕಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಸಂವಿಧಾನದ ಕಲಂ 21ರ ಅನ್ವಯ ಒಟ್ಟಾಗಿ ಬಾಳುವುದು ಮನುಷ್ಯನ ಮೂಲಭೂತ ಹಕ್ಕಾಗಿದೆ ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಅಲ್ಲದೇ ನಟಿ ಖುಷ್ಬು ಹೇಳಿಕೆಯ ಅವರ ವೈಯಕ್ತಿಕದ್ದಾಗಿದೆ. ನೀವು ಇದನ್ನು ಯಾವ ರೀತಿ ಅರ್ಥೈಸುತ್ತೀರಿ. ನಾವು ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲ್ಲ. ಅದು ಖುಷ್ಬು ಅವರ ವೈಯಕ್ತಿಕ ನಿಲುವು. ಇದನ್ನು ನೀವು ಅಪರಾಧ ಎಂದು ಹೇಗೆ ಹೇಳುತ್ತೀರಿ?ಎಂದು ಪ್ರತಿವಾದಿ ನ್ಯಾಯವಾದಿಯನ್ನು ಸುಪ್ರೀಂ ಗಂಭೀರವಾಗಿ ಪ್ರಶ್ನಿಸಿದೆ.