ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತ್ತೆ ಹೊತ್ತಿಕೊಂಡ ಕರುಣಾನಿಧಿ ಉತ್ತರಾಧಿಕಾರಿ ವಿವಾದ (Chennai | Karunanidhi Succession | Azhagiri | Stalin | DMK | Tamilnadu Politics)
ತಮಿಳುನಾಡು ಡಿಎಂಕೆಯಲ್ಲಿ ವಯೋವೃದ್ಧ ಮುಖ್ಯಮಂತ್ರಿ ಕರುಣಾನಿಧಿ ಅವರ ಉತ್ತರಾಧಿಕಾರಿ ಯಾರೆಂಬ ವಿವಾದ ಮತ್ತೆ ಹೊತ್ತಿಕೊಂಡಿದ್ದು, ತನ್ನ ತಂದೆಯ ನಂತರ ಯಾರನ್ನು ಕೂಡ ಪಕ್ಷದಲ್ಲಿ ನಾಯಕನೆಂದು ಒಪ್ಪಿಕೊಳ್ಳಲಾರೆ ಎಂದು ಹಿರಿಯ ಪುತ್ರ, ಕೇಂದ್ರ ಸಚಿವ ಅಳಗಿರಿ ಹೇಳಿದ್ದಾರೆ.
'ಜೂನಿಯರ್ ವಿಕಟನ್' ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು, ಕರುಣಾನಿಧಿ ಇರುವಾಗ ಬೇರೆಯವರ ಬಗ್ಗೆ ಯೋಚಿಸುವ ಅಗತ್ಯವೇ ಇಲ್ಲ, ಅವರ ನಂತರ ಯಾರನ್ನು ಕೂಡ ಡಿಎಂಕೆ ನಾಯಕನೆಂದು ಒಪ್ಪಿಕೊಳ್ಳುವುದಿಲ್ಲ ಎಂದೂ ಹೇಳಿದ್ದಾರೆ.
'ಅಣ್ಣಾ (ಪೆರಿಯಾರ್) ಅವರ ಬಳಿಕ ಕಲೈನಾರ್ ಅವರೇ ನನ್ನ ನಾಯರಾಗಿದ್ದರು ಮತ್ತು ಈಗಲೂ, ಮುಂದೆಯೂ ಅವರೇ ನನ್ನ ನಾಯಕರು. ಅವರ ಸಾಮರ್ಥ್ಯ ಅಥವಾ ಮೌಲ್ಯಗಳಿಗೆ ಹೋಲಿಸಿದರೆ, ಅವರನ್ನು ಯಾರು ಕೂಡ ಸರಿಗಟ್ಟುವುದು ಅಸಾಧ್ಯ' ಎಂದು ಅಳಗಿರಿ ಹೇಳಿದ್ದಾರೆ.
ಜನವರಿ ತಿಂಗಳಲ್ಲಿ ರಾಜಕೀಯ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದ ಕರುಣಾನಿಧಿ, ತಮ್ಮ ಕಿರಿಯ ಪುತ್ರ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿಕೊಂಡು, ಅವರೇ ಉತ್ತರಾಧಿಕಾರಿಯಾಗುತ್ತಾರೆ ಎಂಬ ಕುರಿತು ಸುಳಿವು ನೀಡಿದ್ದರು.
ಉತ್ತರಾಧಿಕಾರ ಬಗೆಗಿನ ವಿವಾದದ ಕಿಚ್ಚು ಹತ್ತಿಕೊಂಡದ್ದು ಆಗಲೇ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿ ಅಳಗಿರಿ ಅಧಿಕಾರ ಸ್ವೀಕರಿಸಿಕೊಂಡ ಮರುದಿನವೇ ಸ್ಟಾಲಿನ್ ಅವರನ್ನು ಕರುಣಾ ಉಪಮುಖ್ಯಮಂತ್ರಿಯಾಗಿ ನೇಮಿಸಿದ್ದರು. ತನ್ನೆಲ್ಲಾ ಖಾತೆಗಳನ್ನೂ ಕಿರಿಯ ಪುತ್ರನಿಗೇ ಕರುಣಾನಿಧಿ ಒಪ್ಪಿಸಿದ್ದರು.
ಅಳಗಿರಿಗೆ ಕೇಂದ್ರದಲ್ಲಿ ಸ್ಥಾನ ನೀಡಿ ಸ್ಟಾಲಿನ್‌ರನ್ನು ಇಲ್ಲಿ ಪ್ರತಿಷ್ಠಾಪಿಸುವುದು ಕರುಣಾನಿಧಿ ಯೋಜನೆಯಾಗಿತ್ತು. ಆದರೆ ಪ್ರಾದೇಶಿಕ ರಾಜಕೀಯದಲ್ಲಿ ಹೆಚ್ಚಿನ ಪಾತ್ರ ನಿರ್ವಹಿಸಲು ಅಳಗಿರಿ ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಅಳಗಿರಿಯು ಮಧುರೈ ವಿಭಾಗದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದು, ಬಲಾಢ್ಯರಾಗಿದ್ದರೆ, ಸ್ಟಾಲಿನ್ ಚೆನ್ನೈ ಸಹಿತ ಇತರ ಭಾಗಗಳಲ್ಲಿ ಡಿಎಂಕೆಯ ಮನ ಗೆದ್ದಿದ್ದಾರೆ. ಅವರ ಬೆಂಬಲಿಗರು ಕೂಡ ತಮ್ಮ ಮುಖಂಡನೇ ಉತ್ತರಾಧಿಕಾರಿಯಾಗಬೇಕೆಂಬ ಇರಾದೆಯಲ್ಲಿದ್ದಾರೆ.
ಇದಕ್ಕೆ ಸಣ್ಣ ಉದಾಹರಣೆಯೆಂದರೆ, ಅಳಗಿರಿ ಜನ್ಮದಿನದಂದು ಒಂದು ಕಡೆ ಪೋಸ್ಟರ್‌ಗಳಲ್ಲಿ, ಅಳಗರಿ ಸಿಎಂಗೆ ಜನ್ಮದಿನದ ಶುಭಾಶಯಗಳು ಎಂಬ ಸಂದೇಶವಿತ್ತು. ಇಲ್ಲಿ ಸಿಎಂ ಎಂದರೆ ಕೆಮಿಕಲ್ ಮಿನಿಸ್ಟರ್ (ರಾಸಾಯನಿಕ ಸಚಿವ) ಆಗಿತ್ತಾದರೂ, ಅಳಗಿರಿ ಜನರು ಅದನ್ನು ನೆನಪಿಸಿಕೊಳ್ಳುವುದೇ ಚೀಫ್ ಮಿನಿಸ್ಟರ್ ಎಂಬುದಾಗಿ.