ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಮಾತ್ರವಲ್ಲ, ಕಾಶ್ಮೀರ ಪ್ರತ್ಯೇಕತೆಗೆ ಚೀನಾ ಬೆಂಬಲ? (Srinagar | Kashmir | Mirwaiz Farooq | China role | Hurriyat Conference)
ಒಂದೆಡೆ ಪಾಕಿಸ್ತಾನ ಕಾಶ್ಮೀರದಲ್ಲಿ ಪ್ರತ್ಯೇಕತವಾದಿಗಳಿಗೆ ಕುಮ್ಮಕ್ಕು ನೀಡುತ್ತಿದ್ದರೆ, ಮತ್ತೊಂದೆಡೆ ಚೀನಾ ಕೂಡ ಬೆಂಬಲ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಚೀನಾದ ಕೈವಾಡವನ್ನು ತಳ್ಳಿ ಹಾಕಿರುವ ನಡುವೆಯೇ, ಕಾಶ್ಮೀರದ ಹುರಿಯತ್ ಕಾನ್ಫರೆನ್ಸ್ ಚೆಯರ್‌ಮೆನ್ ಮಿರ್‌ವಾಯಿಜ್ ಉಮರ್ ಫಾರೂಕ್ ಚೀನಾದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕಾಶ್ಮೀರ ವಿವಾದವನ್ನು ಬಗೆಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.!
ವಿವಾದಕ್ಕೆ ಸಂಬಂಧಿಸಿದಂತೆ ಉಮರ್ ಚೀನಾದ ಉನ್ನತ ಅಧಿಕಾರಿಗಳನ್ನು ಮೊದಲ ಬಾರಿ ಭೇಟಿಯಾಗಿದ್ದಾರೆ. ಉಮರ್ ಚೀನಾದ ವಿದೇಶಾಂಗ ವ್ಯವಹಾರ ಸಚಿವಾಲಯದ ಯಿಂಗ್ ಗಾಂಗ್ ಅವರನ್ನು ಜಿನೆವಾದಲ್ಲಿ ಸೋಮವಾರ ನಡೆದ 13ನೇ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಸಮ್ಮೇಳನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಎನ್‌ಜಿಓ ಸಂಸ್ಥೆಯಾದ ಹ್ಯಾನ್ ಆಹ್ವಾನದ ಮೇರೆಗೆ ಚೀನಾಕ್ಕೂ ಭೇಟಿ ನೀಡಲಿದ್ದಾರೆ.
ಕಾಶ್ಮೀರ ವಿವಾದವನ್ನು ಬಗೆಹರಿಸಲು ಚೀನಾ ಪೂರ್ಣ ಬೆಂಬಲ ನೀಡುವುದಾಗಿ ಗಾಂಗ್ ಚರ್ಚೆಯ ವೇಳೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಉಮರ್ ಹೇಳಿದ್ದಾರೆ.
ಅಲ್ಲದೇ ಚೀನಾ ಕಾಶ್ಮೀರ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆಯನ್ನು ಬೆಂಬಲಿಸುವುದಾಗಿಯೂ ಹೇಳಿರುವುದಾಗಿ ಅವರು ತಿಳಿಸಿದ್ದಾರೆ.
ದೀರ್ಘಕಾಲದ ವಿವಾದದ ಬಗ್ಗೆ ಅರಿವು ಮೂಡಿಸಲು ಚೀನಾ ಕಾಶ್ಮೀರದಲ್ಲಿ ಸಂಶೋಧನಾ ಕೇಂದ್ರವೊಂದನ್ನು ತೆರೆಯುವಂತೆ ತಾನು ಗಾಂಗ್ ಅವರನ್ನು ಒತ್ತಾಯಿಸಿರುವುದಾಗಿಯೂ ಹೇಳಿದರು.
ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕಾಗಿ ಚೀನಾದ ಪ್ರಮುಖ ಪಾತ್ರ ವಹಿಸುವುದನ್ನು ಮುಕ್ತವಾಗಿ ಸ್ವಾಗತಿಸುವುದಾಗಿ ಹುರಿಯತ್ ಕಾನ್ಫರೆನ್ಸ್‌ನ ಮತ್ತೊಬ್ಬ ಮುಖಂಡ ಬಿಲಾಲ್ ಲೋನೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಕಾಶ್ಮೀರ ಸಮಸ್ಯೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಮಾತ್ರ ಮುಖ್ಯ ಪಾತ್ರಧಾರಿಗಳಲ್ಲ ಎಂದಿರುವ ಅವರು, ಇದರೊಂದಿಗೆ ಪಾಶ್ಚಿಮಾತ್ಯ ದೇಶಗಳು ಕೂಡ ಸಮಾನ ಪಾಲುದಾರರು ಎಂದರು.