ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಚ್ಚರ...ಉಗ್ರರ ವಿರುದ್ಧ ಖಾರದ ಮೆಣಸಿನಕಾಯಿ ಗ್ರೆನೇಡ್! (world's hottest chili | Indian Army | bhut jolokia | Guinness World Records)
ಭಯೋತ್ಪಾದಕರ ವಿರುದ್ಧ ವಿಶ್ವದ ಅತಿ ಖಾರವಾದ ಮೆಣಸಿನ ಕಾಯಿಯ ನೂತನ ಆಯುಧವನ್ನು ಬಳಸಲು ಭಾರತೀಯ ಆರ್ಮಿ ಪಡೆ ಮುಂದಾಗಿದೆ. ಅಡುಗೆಗೆ ಮಾತ್ರ ಸೀಮಿತವಾಗಿದ್ದ ಮೆಣಸಿನ ಕಾಯಿ ಇದೀಗ ಉಗ್ರರ ವಿರುದ್ಧವೂ ಬಳಕೆಯಾಗುವಂತಾಗಿದೆ.
ರಕ್ಷಣಾ ವಿಜ್ಞಾನಿಗಳ ತಂಡ ಈ ಬಗ್ಗೆ ಪರೀಕ್ಷೆಗಳನ್ನು ನಡೆಸಿದ ಬಳಿಕ ಇದೀಗ ವಿಶ್ವದಲ್ಲಿಯೇ ಅತ್ಯಂತ ಖಾರವಾದ ಹೆಬ್ಬೆರಳು ಗಾತ್ರದ ಭೂತ್ ಜೋಲೋಕಿಯಾ ಹೆಸರಿನ ಮೆಣಸಿಕಾಯಿಯನ್ನು ಉಪಯೋಗಿಸಿ ಅಸ್ತ್ರ ತಯಾರಿಸಲು ಮಿಲಿಟರಿ ನಿರ್ಧರಿಸಿದ್ದು, ಅಶ್ರುವಾಯು ಮಾದರಿಯ ಹ್ಯಾಂಡ್ ಗ್ರೆನೇಡ್ ಅನ್ನು ತಯಾರಿಸಲು ಮುಂದಾಗಿರುವುದಾಗಿ ರಕ್ಷಣಾ ಅಧಿಕಾರಿಗಳು ವಿವರಿಸಿದ್ದಾರೆ.
ಭೂತ್ ಜೋಲೋಕಿಯಾವನ್ನು 2007ರಲ್ಲಿ ವಿಶ್ವದಲ್ಲಿಯೇ ಅತ್ಯಂತ ಖಾರವಾದ ಮೆಣಸಿನ ಕಾಯಿ ಎಂದು ಗಿನ್ನೆಸ್ ದಾಖಲೆಪಟ್ಟಿ ಸೇರಿತ್ತು. ಇದನ್ನು ವಾಯುವ್ಯ ಭಾಗದ ಪ್ರದೇಶದ ಜನರು ಹೆಚ್ಚಾಗಿ ಬಳಸುತ್ತಾರೆ. ಈ ಮೆಣಸು ಹೊಟ್ಟೆ ಸಂಬಂಧಿ ನೋವು ನಿವಾರಿಸುವ ಗುಣ ಹೊಂದಿದೆ. ಅಲ್ಲದೇ ಬೇಸಿಗೆಯ ಬೇಗೆಯನ್ನು ತಡೆಯಲು ಕೂಡ ಸಹಕಾರಿಯಂತೆ.
ಭಾರತೀಯ ರಕ್ಷಣಾ ಪ್ರಯೋಗಾಲಯದಲ್ಲಿ ಮೆಣಸಿಕಾಯಿ ಗ್ರನೇಡ್ ಬಗ್ಗೆ ಸಂಶೋಧನೆ ನಡೆಸಿ ಆವಿಷ್ಕರಿಸಲಾಗಿತ್ತು. ರಕ್ಷಣಾ ವಿಜ್ಞಾನಿಗಳ ತಂಡ ಹಾಗೂ ಡೆವಲಪ್‌ಮೆಂಟ್ ಆರ್ಗನೈಜೇಷನ್ ಖಚಿತಪಡಿಸಿದ ನಂತರ ಈ ಮೆಣಸಿನಕಾಯಿ ಗ್ರೆನೇಡ್ ಬಳಕೆಗೆ ಮುಂದಾಗಿರುವುದಾಗಿ ಅಸ್ಸಾಂನ ರಕ್ಷಣಾ ವಕ್ತಾರ ಕರ್ನಲ್ ಆರ್.ಕಾಲಿಯಾ ಅವರು ಸುದ್ದಿಸಂಸ್ಥೆಯೊಂದಕ್ಕೆ ವಿವರಿಸಿದ್ದಾರೆ.
'ಇದು ನಿಜಕ್ಕೂ ವಿಷಯುಕ್ತವಲ್ಲದ ಉತ್ತಮವಾದ ಅಸ್ತ್ರವಾಗಿದೆ. ಮೆಣಸಿನ ಕಾಯಿ ಗ್ರೆನೇಡ್ ಬಳಕೆಯಿಂದಾಗಿ ಉಗ್ರರು ಅಡಗುತಾಣಗಳಿಂದ ಹೊರಬರಲು ಹೆಚ್ಚಿನ ಸಹಾಯಕವಾಗಲಿದೆ' ಎಂದು ದೆಹಲಿ ಡಿಆರ್‌ಡಿಓದ ನಿರ್ದೇಶಕ ಆರ್.ಬಿ.ಶ್ರೀವಾಸ್ತವ್ ತಿಳಿಸಿದ್ದಾರೆ.
ಶ್ರೀವಾಸ್ತವ್ ಅಸ್ಸಾಂನ ಲ್ಯಾಬೋರೇಟರಿಯಲ್ಲಿ ಮತ್ತೊಂದು ಸಂಶೋಧನೆಯಲ್ಲಿ ನಿರತರಾಗಿದ್ದು, ದಾಳಿಕೋರರಿಂದ ಮಹಿಳೆಯರು ರಕ್ಷಣೆ ಪಡೆಯಲು ಭೂತ್ ಜೋಲೋಕಿಯಾ ಮೆಣಸಿನ ಕಾಯಿಯಿಂದ ಸ್ಪ್ರೇಯ್ಸ್‌ವೊಂದನ್ನು ತಯಾರಿಸಲಾಗುತ್ತಿದೆ. ಅಲ್ಲದೇ ಗಲಭೆಯಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಕೂಡ ಉಪಯೋಗಿಸಲು ಅನುಕೂಲವಾಗಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಇಲ್ಲಿನ ರಕ್ಷಣಾ ವಿಜ್ಞಾನಿಗಳ ತಂಡವೊಂದು ವಿಶ್ವದಲ್ಲಿಯೇ ಅತಿ ಖಾರವಾದ ಮೆಣಸಿನಕಾಯಿ ಎಂದು ಹೆಸರು ಪಡೆದಿರುವ ಭೂತ್ ಜೊಲಾಕಿಯಾದಿಂದ ಗ್ರೆನೇಡ್ ತಯಾರಿಸಲು ಮುಂದಾಗಿದೆ. ಮೆಣಸಿಕಾಯಿ ವಿಷಯುಕ್ತವಲ್ಲವಾದ್ದರಿಂದ ಗ್ರೆನೇಡ್ ರೂಪದಲ್ಲಿ ಇದನ್ನು ಬಳಸಲು ಅಫಾಯವೂ ಇಲ್ಲ.