12 ವರ್ಷದ ಬಾಲಕಿಯ ಮೇಲೆ ಸಂಬಂಧಿಕರು, ಮಿತ್ರರ ಸಹಿತ 9 ಮಂದಿ ಸತತ ಅತ್ಯಾಚಾರವೆಸಗುತ್ತಿದ್ದ ಪ್ರಕರಣದ ವಿಚಾರಣೆ ಸಂದರ್ಭ ಪೊಲೀಸ್ ಠಾಣೆಯಲ್ಲಿ ನಾಟಕೀಯ ವಿದ್ಯಮಾನಗಳು ನಡೆದಿದ್ದು, ಆರೋಪಿಗಳಲ್ಲೊಬ್ಬನಾದ 71ರ ಹರೆಯದ ವೃದ್ಧನೊಬ್ಬ, "ನಾನು ಷಂಡ, ನಾನು ಅತ್ಯಾಚಾರ ಮಾಡುವುದಾದರೂ ಹೇಗೆ ಸಾಧ್ಯ?" ಎಂದು ಪ್ರಶ್ನಿಸಿ ಅಚ್ಚರಿ ಮೂಡಿಸಿದ್ದಾನೆ.
ಬಾಲಕಿಯ ಮೇಲೆ 41 ಬಾರಿ ಅತ್ಯಾಚಾರ ನಡೆಸಿದ ಆರೋಪ ಹೊತ್ತಿರುವ ಜಮುನಾಪ್ರಸಾದ್ ಶರ್ಮಾ (71), ಪ್ರೇಮ್ ಚಂದ್ ಪಂಡಿತ್ (35), ಜಿತೇಂದ್ರ ಯಾದವ್ (25) ಹಾಗೂ ವಿನೋದ್ ಯಾದವ್ (27) ಎಂಬ ನಾಲ್ವರು ಆರೋಪಿಗಳು ಇದೀಗ ಸಾಕಿನಾಕ ಠಾಣೆಯ ಪೊಲೀಸ್ ಕಸ್ಟಡಿಯಲ್ಲಿದ್ದು, ಅವರನ್ನು ಬಾಲಕಿಯೆದುರು ಹಾಜರುಪಡಿಸಿದಾಗ, ಆಕೆ ರೋದಿಸತೊಡಗಿದಳು. ಜಮುನಾಪ್ರಸಾದ್ ಎಂಬ ಅಜ್ಜನತ್ತ ಕೈತೋರಿಸಿದ ಆಕೆ, ಈತ ತನ್ನ ಮೇಲೆ 41 ಬಾರಿ ಅತ್ಯಾಚಾರ ಎಸಗಿತ ಎಂದೂ ಆರೋಪಿಸಿದಳು.
ಆದರೆ ಆಕೆ ವಾಸಿಸುತ್ತಿದ್ದ ಚಾಲ್ (ಪುಟ್ಟ ಮನೆ)ಯ ಹೊರಗೆ ಅಂಗಡಿ ಇಟ್ಟುಕೊಂಡಿರುವ ಜಮುನಾಪ್ರಸಾದ್ ಈ ಆರೋಪವನ್ನು ನಿರಾಕರಿಸಿ, 'ನಾನು ನಿರ್ವೀರ್ಯ. ಹೀಗಾಗಿ ಅತ್ಯಾಚಾರ ನಡೆಸುವ ಪ್ರಶ್ನೆಯೇ ಇಲ್ಲ. ಬೇಕಿದ್ದರೆ ಪೊಲೀಸರು ವೈದ್ಯಕೀಯ ಪರೀಕ್ಷೆ ಮಾಡಬಹುದು' ಎಂದುತ್ತರಿಸಿದ.
ಈ ಬಾಲಕಿಯ ತಂದೆ-ತಾಯಿ ವಿಚ್ಛೇದಿತರಾಗಿದ್ದು, ಈಕೆ ತನ್ನ ಸೋದರತ್ತೆ ಜೊತೆ ವಾಸಿಸುತ್ತಿದ್ದಾಳೆ. ಆದರೆ, ಜಮುನಾಲಾಲ್‌ಗಿಂತಲೂ ಹೆಚ್ಚುಬಾರಿ, ಅಂದರೆ ಕಳೆದ ಒಂದುವರೆ ವರ್ಷಗಳಿಂದ ಪ್ರತಿದಿನವೆಂಬಂತೆ ತನ್ನ ಸೋದರತ್ತೆ ಮಗ ಧವಳ್ ಬಾಪಟ್, ನಿರಂತರ ಅತ್ಯಾಚಾರವೆಸಗುತ್ತಿದ್ದ ಎಂದು ಬಾಲಕಿ ಕಣ್ಣೀರಿಡುತ್ತಾ ವಿವರಿಸಿದ್ದಾಳೆ. ಇದೀಗ ತಲೆಮರೆಸಿಕೊಂಡಿರುವ ಧವಳ್ ಪತ್ತೆಗೆ, ಆತನ ತಾಯಿ ಜ್ಯೋತ್ಸ್ನಾ ಕೂಡ ಪೊಲೀಸರಿಗೆ ಸಹಕರಿಸುತ್ತಿದ್ದಾರೆ. "ನನ್ನ ಮಗನೇ ಮುಖ್ಯ ಅಪರಾಧಿಯಾಗಿದ್ದು, ಆತ ನನ್ನ ಸೋದರ ಸೊಸೆಯ ಬಾಳು ಹಾಳು ಮಾಡಿದ" ಎಂದಿದ್ದಾರೆ ಜ್ಯೋತ್ಸ್ನಾ.
2008ರಿಂದೀಚೆಗೆ ಈ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿತ್ತು. ಧವಳ್‌ನಿಂದ ಆರಂಭವಾದ ಈ ಕೃತ್ಯವು, ನಂತರ ಆತನ ಗೆಳೆಯರಿಗೂ ವಿಸ್ತರಿಸಿತು. ಧವಳ್ ಸೇರಿದಂತೆ ಇತರ ಐವರಿಗಾಗಿ ಶೋಧ ನಡೆಯುತ್ತಿದೆ ಎಂದು ಸಾಕಿನಾಕ ಪೊಲೀಸರು ತಿಳಿಸಿದ್ದಾರೆ.