ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಕಲ್ಕಿ ಭಗವಾನ್' ಆಶ್ರಮ ಲೀಲೆಯ ದೃಶ್ಯ ಪ್ರಸಾರಕ್ಕೆ ತಡೆ (Madras HC | Kalki Bhagwan | TV channels | Tamil Nadu | Supreme Court)
ಸ್ವಯಂ ಘೋಷಿತ ಕಲ್ಕಿ ಭಗವಾನ್ ಹೈಟೆಕ್ ಆಶ್ರಮದಲ್ಲಿನ ಮಾದಕಲೋಕದ ದೃಶ್ಯವನ್ನು ಪ್ರಸಾರ ಮಾಡದಂತೆ ಮದ್ರಾಸ್ ಹೈಕೋರ್ಟ್ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಸುಮಾರು 30ಚಾನೆಲ್‌ಗಳಿಗೆ ತಾಕೀತು ಮಾಡಿದೆ. ಆಶ್ರಮದ ಒಳಗಿನ ದೃಶ್ಯಾವಳಿ ಪ್ರಸಾರ ಮಾಡದಂತೆ ಕಲ್ಕಿ ಭಗವಾನ್ ಹಾಗೂ ಆತನ ಪುತ್ರ ಕೆವಿಎನ್ ಕೃಷ್ಣಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕಲ್ಕಿ ಭಗವಾನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ರಾಜಾಸೂರ್ಯ ಅವರು, ಇದು ಮಧ್ಯಂತರ ತಡೆಯಾಜ್ಞೆಯಾಗಿದ್ದು, ಮಾ.31ರವರೆಗೆ ಮುಂದುವರಿಯುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ. ಆದರೆ ಟಿವಿ ಚಾನೆಲ್‌ಗಳು ವೀಡಿಯೋ ಕ್ಲಿಪ್ಪಿಂಗ್ ಅನ್ನು ಮಾತ್ರ ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡಲಾಗಿದೆಯೇ ವಿನಃ ಸುದ್ದಿ ಪ್ರಸಾರಕ್ಕೆ ಅಲ್ಲ ಎಂದು ಸ್ಪಷ್ಟಪಡಿಸಿದೆ.
ಟಿವಿ ಚಾನೆಲ್‌ಗಳು ಯಾವುದೇ ಸುದ್ದಿಯನ್ನು ಪ್ರಸಾರ ಮಾಡಲು ಸ್ವತಂತ್ರವಾಗಿವೆ. ಅದು ಯಾವುದೇ ಅಪರಾಧವಲ್ಲ ಎಂದು ನ್ಯಾಯಪೀಠ ಈ ಸಂದರ್ಭದಲ್ಲಿ ಹೇಳಿದೆ.
ಏನಿದು ಕಲ್ಕಿ ಭಗವಾನ್ ಅವಾಂತರ: ತಮಿಳುನಾಡು ಮೂಲದ ನಿತ್ಯಾನಂದ ಸ್ವಾಮಿಯ ರಾಸಲೀಲೆ ಪ್ರಕರಣದ ವಿವಾದದ ಕಿಡಿ ಆರುವ ಮುನ್ನವೇ, ಮತ್ತೊಬ್ಬ ಸ್ವಯಂ ಘೋಷಿತ ಕಲ್ಕಿ ಭಗವಾನ್‌ನ ಹೈಟೆಕ್ ಆಶ್ರಮದಲ್ಲಿನ ಅಮಲು ಪದಾರ್ಥ ಸೇವನೆಯ ಕುಣಿತದ ಅವಾಂತರಗಳು ಮಾಧ್ಯಮಗಳಲ್ಲಿ ಬಟಾಬಯಲಾಗಿತ್ತು.
ಖಾಸಗಿ ಟಿವಿ ಚಾನೆಲ್‌ವೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಚೆನ್ನೈನಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ಗೋಲ್ಡನ್ ಸಿಟಿಯ ಹೈಟೆಕ್ ಆಶ್ರಮದಲ್ಲಿ ಭಕ್ತರು ಅಮಲು ಪದಾರ್ಥ ಸೇವಿಸಿ ಕುಣಿಯುವ ದೃಶ್ಯ, ಹಾರಾಟ, ಚೀರಾಟ, ನೆಲದಲ್ಲಿ ಬಿದ್ದು, ಬಿದ್ದು ಹೊರಳಾಡುವ ಮಹಿಳೆಯರು...ಇವರ ಅವಸ್ಥೆಗಳನ್ನು ನೋಡಿ ಮುಸಿ,ಮುಸಿ ನಗುವ ಕಲ್ಕಿ ಭಗವಾನ್‌ನ ಆಶ್ರಮದ ವಿಕ್ಷಿಪ್ತ ಲೋಕ ಜಗಜ್ಜಾಹೀರಾಗಿತ್ತು.
ನಿತ್ಯಾನಂದ ಸ್ವಾಮಿಯಂತೆಯೇ ದೇಶ-ವಿದೇಶಗಳಲ್ಲಿಯೂ ಲಕ್ಷಾಂತರ ಭಕ್ತರನ್ನು ಹೊಂದಿರುವ ಕಲ್ಕಿ ಭಗವಾನ್ ದಂಪತಿಗಳು ಸ್ವತಃ ವಿಷ್ಣುವಿನ ಅಪರಾವತಾರವಂತೆ!
ಕಲ್ಕಿ ಭಗವಾನ್ ಹಾಗೂ ಆತನ ಪತ್ನಿ ಪದ್ಮಾವತಿ ಅಮ್ಮನ ದರ್ಶನಕ್ಕಾಗಿ ಪ್ರತಿದಿನ ಸಾವಿರಾರು ಮಂದಿ ಹೈಟೆಕ್ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಅಲ್ಲದೇ ವಿವಿಧ ರೋಗ, ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವ ಭಕ್ತರಿಗೆ ಭಗವಾನ್ ಅವರ ತಲೆಯ ಮೇಲೆ ಪಾದುಕೆ ಇಟ್ಟರೆ ಇಷ್ಟಾರ್ಥ ನೆರವೇರುತ್ತೆ ಎಂಬ ನಂಬಿಕೆ ಭಕ್ತರದ್ದು.
ಅಮೆರಿಕದ ಶ್ವೇತಭವನನ್ನು ಹೋಲುವಂಥ ಬೃಹತ್ ಹೈಟೆಕ್ ಆಶ್ರಮದೊಳಗೆ ಒಬ್ಬರಿಗೊಬ್ಬರನ್ನು ತಬ್ಬಿಕೊಂಡು ಮುತ್ತಿಕ್ಕುವುದು, ಅಮಲು ಪದಾರ್ಥ ಸೇವಿಸಿ ತೂರಾಡುವುದು, ಕಿರುಚಾಡುವುದು, ಸಣ್ಣ, ಸಣ್ಣ ಕುಟೀರದೊಳಗೆ ಯುವತಿಯರ ಮಾದಕ ಅಪ್ಪುಗೆ, ಬೆತ್ತಲೆ ಕುಣಿತದ ದೃಶ್ಯಗಳು ಜನಸಾಮಾನ್ಯರನ್ನು ಬೆಚ್ಚಿಬೀಳಿಸಿದ್ದವು!
ಚೆನ್ನೈ ಸಮೀಪದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವರದಯ್ಯನ ಪಾಳ್ಯದಲ್ಲಿರುವ ಈ ಹೈಟೆಕ್ ಆಶ್ರಮ ಎಂತಹವರನ್ನೂ ಮೂಕವಿಸ್ಮಿತರನ್ನಾಗಿ ಮಾಡುತ್ತೆ. ತಮಿಳುನಾಡಿನ ಉತ್ತರ ಆರ್ಕೊಟ್ ಜಿಲ್ಲೆಯ ನಾಥಾಂನಲ್ಲಿ ಜನಿಸಿರುವ ಈತ ಇದೀಗ ಸಾಕ್ಷಾತ್ ವಿಷ್ಣುವಿನ ಅಪರಾವತಾರ ಕಲ್ಕಿ ಭಗವಾನ್ ಆಗಿರುವುದು ಹಳೇ ಕಥೆ.