ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರರ ಮಾಹಿತಿ ಬಹಿರಂಗ: ಎಟಿಎಸ್ ಚೀಫ್ ತಲೆದಂಡ (Raghuvanshi | M'rashtra ATS | Rakesh Maria | 26/11 terror attacks)
ಬಂಧಿತರಾಗಿದ್ದ ಇಬ್ಬರು ಶಂಕಿತ ಉಗ್ರರ ಮಾಹಿತಿಯನ್ನು ಬಹಿರಂಗಗೊಳಿಸಿರುವುದಕ್ಕೆ ಕೇಂದ್ರ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ಪಿ.ರಘುವಂಶಿಯನ್ನು ಅವರ ಸ್ಥಾನದಿಂದ ವಜಾಗೊಳಿಸಲಾಗಿದೆ.
ಉಗ್ರರ ಮಾಹಿತಿಯನ್ನು ಬಹಿರಂಗಪಡಿಸಿ ತಲೆದಂಡಕ್ಕೆ ಒಳಗಾಗಿರುವ ರಘುವಂಶಿ ಸ್ಥಾನಕ್ಕೆ ಕ್ರೈಂ ಬ್ರ್ಯಾಂಚ್ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿದ್ದ ರಾಕೇಶ್ ಮಾರಿಯಾ ಅವರನ್ನು ನೇಮಕಗೊಳಿಸುವುದಾಗಿ ಗೃಹಸಚಿವಾಲಯದ ಮೂಲಗಳು ತಿಳಿಸಿವೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ರಘುವಂಶಿ ಅವರು ರಾಜ್ಯದ ಕಾನೂನು ಸುವ್ಯವಸ್ಥೆಯ ಇಲಾಖೆಯ ಜವಾಬ್ದಾರಿಯನ್ನುನಿರ್ಲಕ್ಷ್ಯಿಸಿರುವುದಾಗಿ ಸಚಿವಾಲಯ ಆರೋಪಿಸಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ನಗರದಲ್ಲಿ ಬಂಧಿಸಲ್ಪಟ್ಟ ಇಬ್ಬರು ಶಂಕಿತ ಉಗ್ರರ ಕುರಿತು ಮಾಧ್ಯಮಗಳಿಗೆ ರಘುವಂಶಿ ಅವರು ಮಹತ್ವದ ಮಾಹಿತಿಗಳನ್ನು ಬಹಿರಂಗಗೊಳಿಸಿರುವುದು ಕೇಂದ್ರ ಗೃಹಸಚಿವಾಲಯದ ಕೆಂಗಣ್ಣಿಗೆ ಗುರಿಯಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಗರದ ಓಎನ್‌ಜಿಸಿ ಮತ್ತು ವಾಣಿಜ್ಯ ಮಳಿಗೆ ಮೇಲೆ ದಾಳಿ ನಡೆಸುವ ಯೋಜನೆಯನ್ನು ಉಗ್ರರು ಹೊಂದಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲಾಖೆಯಲ್ಲಿನ ಅಧಿಕಾರ ಬದಲಾವಣೆಯ ನಂತರ ರಾಕೇಶ್ ಮಾರಿಯಾ ಅವರು ಗೃಹ ಸಚಿವ ಆರ್.ಆರ್.ಪಾಟೀಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಎಟಿಎಸ್ ವರಿಷ್ಠ ಸ್ಥಾನದಿಂದ ವಜಾಗೊಂಡಿರುವ ರಘುವಂಶಿ ಅವರನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
26/11ರ ಭಯೋತ್ಪಾದಕರ ದಾಳಿಯ ಸಂದರ್ಭದಲ್ಲಿ ಹೇಮಂತ್ ಕರ್ಕರೆ ಅವರು ಬಲಿಯಾದ ನಂತರ, ಎಟಿಎಸ್‌ಗೆ ಕಳೆದ ವರ್ಷ ಜೂನ್ ತಿಂಗಳಿನಲ್ಲಿ ರಘುವಂಶಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು.