ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿತ್ಯಾನಂದ ರಾಜಿ ಸೂತ್ರ: ಲೆನಿನ್‌ಗೆ ಸ್ವಾಮಿಯಾಗಿಸುವ ಆಮಿಷ? (Nityananda Swami | Lenin Karuppan | Dhyanapeetham | Sex Tape)
ಧ್ಯಾನಪೀಠ ಆಶ್ರಮದ ನಿತ್ಯಾನಂದ ಸ್ವಾಮಿಯ ರಾಸಲೀಲೆಗಳನ್ನು ವೀಡಿಯೋ ಮೂಲಕ ಬಹಿರಂಗಪಡಿಸಿರುವುದಾಗಿ ಹೇಳಿಕೊಂಡಿದ್ದ, ಮಾಜಿ ಶಿಷ್ಯ, ಮಾಜಿ ಕಾರು ಚಾಲಕ ಲೆನಿನ್ ಕುರುಪ್ಪನ್ ಜೊತೆಗೆ ಸ್ವತಃ ನಿತ್ಯಾನಂದ ದೂರವಾಣಿ ಮಾತುಕತೆ ನಡೆಸಿದ್ದು, ರಾಜಿ ಸಂಧಾನಕ್ಕೆ ಮುಂದಾಗಿದ್ದಾನೆ ಎಂದು ಮೂಲಗಳು ವರದಿ ಮಾಡಿವೆ.
ಈ ರಾಜಿ ಸೂತ್ರದ ಪ್ರಕಾರ, ದೇಶಾದ್ಯಂತ ಇರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ತಮ್ಮ ಸುಮಾರು 33 ಆಶ್ರಮಗಳಲ್ಲಿ ಒಂದು ಆಶ್ರಮದ ಒಡೆತನವನ್ನು ಅಥವಾ ಉಸ್ತುವಾರಿಯನ್ನು ಲೆನಿನ್‌ಗೆ ನೀಡುವ ಸಾಧ್ಯತೆಯಿದೆ ಮತ್ತು ಸ್ವತಃ ಈತನೂ ಒಬ್ಬ ಸ್ವಾಮಿಯಾಗಬಹುದಾಗಿದೆ ಎನ್ನುತ್ತವೆ ಸುದ್ದಿ ಮೂಲಗಳು.
ಆದರೆ ಈ ರೀತಿ ಸ್ವಾಮಿಯಾಗಬೇಕಿದ್ದರೆ, ಮಾಜಿ ಒಡೆಯ ಹೇಳಿದಂತೆ ಲೆನಿನ್ ಕೇಳಬೇಕಾಗುತ್ತದೆ. ತಮಿಳುನಾಡಿನಲ್ಲಿರುವ ಲೆನಿನ್ ಜೊತೆ ಸುಮಾರು ಅರ್ಧ ಗಂಟೆ ಕಾಲ ನಿತ್ಯಾನಂದ ಸ್ವಾಮಿ ಮಾತನಾಡಿದ್ದಾನೆ ಎನ್ನಲಾಗಿದ್ದು, ದೂರು ವಾಪಸ್ ತೆಗೆದುಕೊಳ್ಳುವಂತೆ ಕೇಳಿಕೊಂಡನೆಂಬ ಕುರಿತ ವರದಿಗಳು ಮಾಧ್ಯಮಗಳಲ್ಲಿ ಸುಳಿದಾಡುತ್ತಿವೆ.
ಲೆನಿನ್‌ನ ಹಲವು ಬೇಡಿಕೆಗಳನ್ನು ಈಡೇರಿಸುವ ಮತ್ತು ತನ್ನ ಆಧ್ಯಾತ್ಮಿಕ ಸಾಮ್ರಾಜ್ಯದಲ್ಲಿ ಉನ್ನತ ಸ್ಥಾನವೊಂದನ್ನು ಕೊಡುವ ಬಗ್ಗೆಯೂ ನಿತ್ಯಾನಂದ ಭರವಸೆ ನೀಡಿರುವುದಾಗಿ ಈ ವರದಿಗಳು ಹೇಳುತ್ತಿವೆ.
ಸಂಭಾಷಣೆ ಸಂದರ್ಭ ಲೆನಿನ್, ತಾನು ನಿಮ್ಮ ಪ್ರಾಮಾಣಿಕ ಮತ್ತು ಶ್ರದ್ಧೆಯ ಭಕ್ತನಾಗಿದ್ದೆ, ಆದರೆ ತನ್ನ ಬಗ್ಗೆ ನಿರ್ಲಕ್ಷ್ಯ ಮನೋಭಾವ ತೋರಿದ್ದಲ್ಲದೆ, ಬೇರೆ ಮಹಿಳೆಯರೊಂದಿಗೆ ಹಾಸಿಗೆ ಹಂಚಿಕೊಂಡಿರುವುದು ತನ್ನ ನೋವಿಗೆ ಕಾರಣ ಎಂದು ವಿವರಿಸಿದನೆನ್ನಲಾಗಿದೆ. ನಿತ್ಯಾನಂದ ಭಕ್ತರು ತನ್ನ ಮೇಲೆ ದಾಳಿ ಮಾಡಬಹುದೆಂಬ ಆತಂಕ ವ್ಯಕ್ತಪಡಿಸಿದ ಲೆನಿನ್‌ಗೆ, ಸೂಕ್ತ ರಕ್ಷಣೆಗೆ ಏರ್ಪಾಡು ಮಾಡುವುದಾಗಿಯೂ ಭರವಸೆ ನೀಡಿದನೆಂದು ಸುದ್ದಿ ಮೂಲಗಳು ವರದಿ ಮಾಡಿವೆ.
ಆದರೆ, ಆಶ್ರಮದ ಮೂಲಗಳು ಹೇಳುವಂತೆ, ಸ್ವಾಮಿಗೆ ನೆರವಾಗುವುದು ಲೆನಿನ್‌ಗೆ ಅಷ್ಟು ಸುಲಭದ ಕೆಲಸವಲ್ಲ. 'ಕರುಪ್ಪನ್ ನಿತ್ಯಾನಂದನಿಗೆ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ. ಮತ್ತಷ್ಟು ಮರ್ಯಾದೆ ಹೋಗುವುದರಿಂದ ತಪ್ಪಿಸಿಕೊಳ್ಳಲು ನಿತ್ಯಾನಂದ ಸ್ವಾಮಿಯು ತನ್ನೆಲ್ಲಾ ವಿರೋಧಿಗಳನ್ನು ಬುಟ್ಟಿಗೆ ಹಾಕಿಕೊಳ್ಳಬೇಕಾಗಿದೆ. ಸದ್ಯಕ್ಕೆ ಅದು ಕಷ್ಟಕರ ಸಂಗತಿಯಾಗಿದ್ದು, ಅಸಹಾಯರಾಗಿದ್ದಾರೆ' ಎಂದು ಮೂಲವೊಂದು ಹೇಳಿದೆ.