ಆಂಧ್ರಪ್ರದೇಶದಲ್ಲಿ ಶೈಕ್ಷಣಿಕ ಸಂಸ್ಥೆ ಹಾಗೂ ಉದ್ಯೋಗದಲ್ಲಿ ಹಿಂದುಳಿದ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರ ನೇತೃತ್ವದ ಪೀಠ, ಮುಸ್ಲಿಮ್ ಸಮುದಾಯಕ್ಕೆ ಶೈಕ್ಷಣಿಕ ಸಂಸ್ಥೆ ಮತ್ತು ಉದ್ಯೋಗದಲ್ಲಿ ಶೇ.4ರಷ್ಟು ಮೀಸಲಾತಿ ನೀಡುವ ಆಂಧ್ರಪ್ರದೇಶ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಈ ಮಹತ್ವದ ಆದೇಶವನ್ನು ನೀಡಿದೆ.
ಕೇವಲ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಮ್ ಕಾಯ್ದೆ 2007ರಲ್ಲಿ ಒಳಗೊಂಡಂತೆ ಹಿಂದುಳಿದ 14ವರ್ಗಗಳಿಗೆ ಮಾತ್ರ ಶೇ.4ರಷ್ಟು ಮೀಸಲಾತಿ ದೊರೆಯಲಿದೆ ಎಂದು ತೀರ್ಪಿನಲ್ಲಿ ಸುಪ್ರೀಂ ನ್ಯಾಯಪೀಠ ಸ್ಪಷ್ಟಪಡಿಸಿದೆ. ಏನೇ ಆಗಲಿ ಇವತ್ತಿನದು ಮಧ್ಯಂತರ ಆದೇಶವಾಗಿದೆ ಎಂದಿರುವ ಸುಪ್ರೀಂಕೋರ್ಟ್, ಈ ವಿವಾದದ ಬಗ್ಗೆ ಸಂವಿಧಾನ ಪೀಠ ಅಂತಿಮವಾಗಿ ಆಗೋಸ್ಟ್ ತಿಂಗಳಿನಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದೆ.
ಮುಸ್ಲಿಮರಿಗೆ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಯಲ್ಲಿ ಶೇ.4ರಷ್ಟು ಮೀಸಲಾತಿ ನೀಡುವ ಬಗ್ಗೆ ಆಂಧ್ರಪ್ರದೇಶ ಹೈಕೋರ್ಟ್‌ನ ಏಳು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠ, ವಿರೋಧ ವ್ಯಕ್ತಪಡಿಸಿತ್ತು. ಹಿಂದುಳಿದ ವರ್ಗದ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುವುದು ಸಂವಿಧಾನದ ಪರಿಚ್ಛೇದ 14, 15(1) ಹಾಗೂ 16(2)ರ ಸ್ಪಷ್ಟ ಉಲ್ಲಂಘನೆಯಾದಂತೆ ಆಗುತ್ತದೆ ಎಂದು ವಿವರಣೆ ನೀಡಿತ್ತು.