ವಿನಯ್ ಕಟಿಯಾರ್, ಉಮಾ ಭಾರತಿ, ಸಾಧ್ವಿ ಕೂಡ ಪ್ರಚೋದನಾಕಾರಿ ಭಾಷಣ
ನವದೆಹಲಿ, ಶುಕ್ರವಾರ, 26 ಮಾರ್ಚ್ 2010( 16:58 IST )
PTI
'ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸದ ದಿನದಂದು ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ , ವಿನಯ್ ಕಟಿಯಾರ ಸೇರಿದಂತೆ ಕೆಲ ಪ್ರಮುಖರು ಪ್ರಚೋದನಾಕಾರಿ ಭಾಷಣ ಮಾಡಿದ್ದರು' ಎಂದು ಹಿರಿಯ ಐಪಿಎಸ್ ಅಧಿಕಾರಿ, ಪ್ರತ್ಯಕ್ಷ ಸಾಕ್ಷಿಯಾಗಿರುವ ಅಂಜು ಗುಪ್ತಾ ಶುಕ್ರವಾರ ವಿಶೇಷ ಸಿಬಿಐ ಕೋರ್ಟ್‌ನಲ್ಲಿ ಹೇಳಿಕೆ ನೀಡುವ ಮೂಲಕ ದೇಶಾದ್ಯಂತ ತೀವ್ರ ಕೋಮುದಳ್ಳುರಿಗೆ ಕಾರಣವಾದ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ.
ಸುಮಾರು 17ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಬಾಬ್ರಿ ಕಟ್ಟಡ ಧ್ವಂಸ ನಡೆಯುವ ಮುನ್ನ, ಆಡ್ವಾಣಿ ಸೇರಿದಂತೆ ಸಂಘ ಪರಿವಾರದ ವಿನಯ್ ಕಟಿಯಾರ್, ಉಮಾ ಭಾರತಿ ಹಾಗೂ ಸ್ವಾಧ್ವಿ ರಿತಾಂಬರಾ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದರಿಂದಲೇ ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣವಾಯಿತು ಎಂದು ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದಾರೆ.
'16ನೇ ಶತಮಾನದಲ್ಲಿ ನಿರ್ಮಿಸಿದ್ದ ಬಾಬ್ರಿ ಮಸೀದಿಯ ಸ್ಥಳದಲ್ಲಿಯೇ ರಾಮ ಮಂದಿರವನ್ನು ನಿರ್ಮಿಸುವುದಾಗಿ ಆಡ್ವಾಣಿ ಹಾಗೂ ಇನ್ನಿತರ ಬಿಜೆಪಿ ಮುಖಂಡರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು ಎಂದು ಗುಪ್ತಾ ತಿಳಿಸಿದ್ದಾರೆ.
1990ರ ಸಾಲಿನ ಐಪಿಎಸ್ ಅಧಿಕಾರಿಯಾಗಿದ್ದ ಗುಪ್ತಾ ಅವರು, ಅಂದು ಆಡ್ವಾಣಿ ಅವರ ಖಾಸಗಿ ಭದ್ರತಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಲಕ್ಷಾಂತರ ಕರಸೇವಕರು ನೆರೆದಿದ್ದು, ಆ ದಿನದಂದು ಆಡ್ವಾಣಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂಬುದಕ್ಕೆ ಗುಪ್ತಾ ಅವರು ಪ್ರಕರಣದ 9ನೇ ಪ್ರತ್ಯಕ್ಷ ಸಾಕ್ಷಿಯಾಗಿದ್ದರು.
ಅಂಜು ಗುಪ್ತಾ ಅವರು ಆ ಸಂದರ್ಭದಲ್ಲಿ ಎಲ್.ಕೆ.ಆಡ್ವಾಣಿ ಅವರ ಖಾಸಗಿ ಭದ್ರತಾ ಅಧಿಕಾರಿಯಾಗಿದ್ದರು. ಇದೀಗ ಪ್ರಮುಖ ಪ್ರತ್ಯಕ್ಷ ಸಾಕ್ಷಿಯಾಗಿರುವ ಗುಪ್ತಾ ಹೇಳಿಕೆ ಆಡ್ವಾಣಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಬಾಬ್ರಿ ಧ್ವಂಸ ಪ್ರಕರಣದ ಕುರಿತ ವಿಚಾರಣೆ ವೇಳೆ ಗುಪ್ತಾ ಅವರು ಈ ಹೇಳಿಕೆ ನೀಡಿದ್ದು, ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿದೆ. ಮುಂದಿನ ವಿಚಾರಣೆಯಲ್ಲಿ ಗುಪ್ತಾ ಅವರನ್ನು ಪ್ರತಿವಾದಿ ವಕೀಲರು ಪ್ರಶ್ನಿಸಲಿದ್ದಾರ
ಲಿಬರ್ಹಾನ್ ವರದಿ: 1992 ಡಿಸೆಂಬರ್ 5 ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಗ್ರ ವರದಿಯನ್ನು 17 ವರ್ಷಗಳ ನಂತರ ಕಳೆದ ಜೂನ್ ತಿಂಗಳಲ್ಲಿ ನ್ಯಾಯಮೂರ್ತಿ ಎಂಎಸ್ ಲಿಬರ್ಹಾನ್ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿಯೂ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪ್ರತಿಪಕ್ಷದ ನಾಯಕ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರಿಗೆ ಬಾಬ್ರಿ ಧ್ವಂಸ ಮಾಡುವುದು ಮುಂಚೆ ತಿಳಿದಿತ್ತು. ಬಾಬ್ರಿ ಧ್ವಂಸ ಪ್ರಕರಣ ಪೂರ್ವ ನಿಯೋಜಿತ ಕೃತ್ಯ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಸಂದರ್ಭದಲ್ಲಿ ಲಿಬರ್ಹಾನ್ ವರದಿ ಸಮರ್ಪಕವಾಗಿಲ್ಲ ಎಂದು ಆಡ್ವಾಣಿ ಸೇರಿದಂತೆ ಬಿಜೆಪಿ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿತ್ತು.