ಸೋನಿಯಾ ಕೂಡ ನೋಟಿನ ಹಾರ ಹಾಕಿಸಿಕೊಂಡಿದ್ರು: ಬಿಎಸ್ಪಿ ತಿರುಗೇಟು
ಲಕ್ನೋ, ಶುಕ್ರವಾರ, 26 ಮಾರ್ಚ್ 2010( 18:37 IST )
ಬಹುಜನ ಸಮಾಜವಾದಿ ಪಕ್ಷದ ಬೆಳ್ಳಿ ಹಬ್ಬಸಂಭ್ರಮದ ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರ ಕೊರಳಿಗೆ ನೋಟಿನ ಹಾರ ಹಾಕಿದ್ದ ವಿವಾದ ಮತ್ತೆ ಮುಂದುವರಿದಿದ್ದು, ಮಾಯಾವತಿಯೊಬ್ಬರೇ ಕೊರಳಿಗೆ ನೋಟಿನ ಹಾರ ಹಾಕಿಕೊಂಡಿಲ್ಲ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ನೋಟಿನ ಹಾರ ಹಾಕಿಸಿಕೊಂಡಿರುವುದಾಗಿ ಬಿಎಸ್ಪಿ ಹಿರಿಯ ಮುಖಂಡ ನಾಸೀಮುದ್ದೀನ್ ಸಿದ್ದಿಕಿ ತಿರುಗೇಟು ನೀಡಿದ್ದಾರೆ.
ಲಕ್ನೋದಲ್ಲಿ ಶುಕ್ರವಾರ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ ಸಂದರ್ಭದಲ್ಲಿ, ಸೋನಿಯಾಗಾಂಧಿ ಅವರ ಕೊರಳಿಗೂ ಸಾವಿರ ರೂಪಾಯಿ ನೋಟಿನ ಹಾರ ಹಾಕಿದ್ದ ಫೋಟೋಗ್ರಾಫ್ಸ್ ಅನ್ನು ಪ್ರದರ್ಶಿಸಿದರು. ಅಲ್ಲದೇ, ಮಾಯಾವತಿ ಅವರ ಕೊರಳಿಗೆ ನೋಟಿನ ಹಾರ ಹಾಕಿದ್ದ ವಿಷಯವನ್ನೇ ದೊಡ್ಡದು ಮಾಡಿ ಸಂಸತ್‌ನಲ್ಲಿ ಕೋಲಾಹಲವೆಬ್ಬಿಸುವ ಕಾಂಗ್ರೆಸ್‌ನವರಿಗೆ ತಾವೇ ಮಾಡಿದ ತಪ್ಪು ಮರೆತು ಹೋಯಿತಾ ಎಂದು ಪ್ರಶ್ನಿಸಿದ್ದಾರೆ.
ವಾಲ್ಕೀಕಿ ಜಯಂತಿ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೊರಳಿಗೆ ಸಾವಿರ ರೂಪಾಯಿ ನೋಟಿನ ಹಾರವನ್ನು ವಾಲ್ಮೀಕಿ ಜನಾಂಗದವರು ಉಡುಗೊರೆಯಾಗಿ ಕೊಟ್ಟಿರುವುದಾಗಿ ಅವರು ಹೇಳಿದರು. ಹಾಗಾದರೆ ವಾಲ್ಮೀಕಿ ಜನಾಂಗದವರಿಗೆ ಭಾರೀ ಮೊತ್ತದ ಹಣ ಎಲ್ಲಿಂದ ಬಂತು ಅಂತು ನಾನು ಪ್ರಶ್ನಿಸುತ್ತೇನೆ ಎಂದು ತರಾಟೆಗೆ ತೆಗೆದುಕೊಂಡ ಸಿದ್ದಿಕಿ, ಆ ನಿಟ್ಟಿನಲ್ಲಿ ಸೋನಿಯಾಗಾಂಧಿ ಕೂಡ ಈ ಬಗ್ಗೆ ಪ್ರಶ್ನಿಸುವ ಅಥವಾ ಪ್ರತಿಕ್ರಿಯೆ ನೀಡುವ ನೈತಿಕತೆ ಇಲ್ಲ ಎಂದು ಹರಿಹಾಯ್ದರು.
ಇದೀಗ ಮಾಯಾವತಿ ಅವರ ನೋಟಿನ ಹಾರಕ್ಕೆ ಬಳಸಲಾದ ಹಣದ ಮೂಲ ಯಾವುದು ಎಂಬುದರ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ. ಮಾಯಾ ನೋಟಿನ ಹಾರದ ಬಗ್ಗೆ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದವು.