ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬ್ರಿ ಭೂತ-ಆಡ್ವಾಣಿ ರಾಜಕೀಯ ಸನ್ಯಾಸ ಸ್ವೀಕರಿಸಲಿ: ಕಾಂಗ್ರೆಸ್ (Babri demolition | L K Advani | BJP | Muslim groups | Anju Gupta)
ಬಾಬ್ರಿ ಭೂತ-ಆಡ್ವಾಣಿ ರಾಜಕೀಯ ಸನ್ಯಾಸ ಸ್ವೀಕರಿಸಲಿ: ಕಾಂಗ್ರೆಸ್
ನವದೆಹಲಿ, ಶನಿವಾರ, 27 ಮಾರ್ಚ್ 2010( 12:27 IST )
ದೇಶಾದ್ಯಂತ ತೀವ್ರ ಕೋಮುದಳ್ಳುರಿಗೆ ಕಾರಣವಾಗಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂದು ಐಪಿಎಸ್ ಅಧಿಕಾರಿ ಅಂಜು ಗುಪ್ತಾ ಸಾಕ್ಷ್ಯ ನುಡಿದ ಬೆನ್ನಲ್ಲೇ, ಆಡ್ವಾಣಿ ಅವರು ರಾಜಕೀಯ ಸನ್ಯಾಸ ಸ್ವೀಕರಿಸಲಿ ಎಂದು ಕಾಂಗ್ರೆಸ್ ಮತ್ತು ಮುಸ್ಲಿಮ್ ಸಂಘಟನೆಗಳು ಆಗ್ರಹಿಸಿವೆ.
ಬಾಬ್ರಿ ಮಸೀದಿ ಧ್ವಂಸ ಸಂದರ್ಭದಲ್ಲಿ ಆಡ್ವಾಣಿ, ಉಮಾಭಾರತಿ, ಸಾಧ್ವಿ ರಿತಾಂಬರಾ ಸೇರಿದಂತೆ ಹಲವು ಮುಖಂಡರು ಪ್ರಚೋದನಾಕಾರಿ ಭಾಷಣ ಮಾಡಿದ್ದೇ ಕರಸೇವಕರಿಗೆ ಸ್ಫೂರ್ತಿ ಸಿಕ್ಕಂತಾಗಿತ್ತು ಎಂದು ಅಂದು ಆಡ್ವಾಣಿ ಅವರ ಖಾಸಗಿ ಭದ್ರತಾ ಅಧಿಕಾರಿಯಾಗಿದ್ದ ಅಂಜು ಗುಪ್ತಾ ಅವರು ಶುಕ್ರವಾರ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು.
ಏತನ್ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಬಿಜೆಪಿ ನಿರಾಕರಿಸಿದೆ. ನ್ಯಾಯಾಲಯದ ಮುಂದೆ ಇನ್ನೂ 40ಮಂದಿ ಸಾಕ್ಷ್ಯ ನುಡಿಯಲು ಬಾಕಿ ಇದ್ದು, ಹಾಗಾಗಿ ಗುಪ್ತಾ ಅವರ ಹೇಳಿಕೆ ಬಗ್ಗೆ ಯಾವುದೇ ಅಭಿಪ್ರಾಯ ನೀಡುವುದಿಲ್ಲ ಎಂದಿದೆ. ಆದರೆ ಆಡ್ವಾಣಿ ಅವರು ರಾಜಕೀಯ ನಿವೃತ್ತಿ ಘೋಷಿಸಬೇಕೆಂದು ಕಾಂಗ್ರೆಸ್ ಈ ಸಂದರ್ಭದಲ್ಲಿ ಒತ್ತಾಯಿಸಿದೆ.
ಭಾರತ ಪ್ರಜಾಸತ್ತಾತ್ಮಕ ದೇಶವಾಗಿದೆ. ಆ ನಿಟ್ಟಿನಲ್ಲಿ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ವ್ಯಕ್ತಿಗಳಿಗೆ ಯಾವುದೇ ಅವಕಾಶ ಇಲ್ಲ ಎಂದು ಆಡ್ವಾಣಿ ಅವರನ್ನು ಗುರಿಯಾಗಿರಿಸಿ ಕಾಂಗ್ರೆಸ್ ಟೀಕಿಸಿದೆ.
ಆಡ್ವಾಣಿ ವಿರುದ್ಧ ದೋಷಾರೋಪ ಹೊರಿಸುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ, ಆದರೆ ಅವರು ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದು ಉತ್ತಮ ಎಂದು ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ತಿಳಿಸಿದ್ದಾರೆ.