ಗೋಧ್ರಾದಲ್ಲಿ ಕರಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಿ 50ಕ್ಕೂ ಹೆಚ್ಚು ಮಂದಿಯ ಹತ್ಯೆಯಾದ ಬಳಿಕ ಗುಜರಾತಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ನಿಯೋಜಿಸಿದ ವಿಶೇಷ ತನಿಖಾ ತಂಡ (ಎಸ್ಐಟಿ) ಎದುರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಹಾಜರಾಗಿ, ತನಿಖಾ ತಂಡಕ್ಕೆ ಸಂಪೂರ್ಣ ಸಹಕರಿಸುವುದಾಗಿ ತಿಳಿಸಿರುವುದರೊಂದಿಗೆ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಮಧ್ಯಾಹ್ನದಿಂದ ಸಂಜೆವರೆಗೆ ಸುಮಾರು 5 ಗಂಟೆಗಳ ಕಾಲ ಮೋದಿ ಅವರನ್ನು ವಿಚಾರಣೆಗೊಳಪಡಿಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಕೂಡ ಭಾರತದ ಕಾನೂನಿಗೆ ಹೊರತಲ್ಲ. ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ, ಪುನಃ ರಾತ್ರಿ ವಿಚಾರಣೆಗೆ ಹಾಜರಾಗುವುದಾಗಿ ಹಾಗೂ ವಿಚಾರಣೆಯನ್ನು ಈ ದಿನವೇ ಪೂರ್ಣಗೊಳಿಸಿಬಿಡಲು ಉತ್ಸುಕವಾಗಿರುವುದಾಗಿ ನುಡಿದರು.
ಈ ಮೊದಲು, ಯಾರು ಕೂಡ ಕಾನೂನಿಗಿಂತ ಮೇಲಲ್ಲ ಎಂದು ಮೋದಿ ವಿಚಾರಣೆಗೆ ಮುನ್ನ ಕಾಂಗ್ರೆಸ್‌ನ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿಕೆ ನೀಡಿದ್ದರು. ಮಾತ್ರವಲ್ಲದೆ, ಮಾ.21ರಂದು ಮೋದಿಗೆ ಸಮನ್ಸ್ ನೀಡಲಾಗಿದ್ದರೂ ಅವರು ವಿಚಾರಣೆಗೆ ತಪ್ಪಿಸಿಕೊಂಡಿದ್ದರು ಎಂಬುದಾಗಿ ವರದಿಯಾಗಿತ್ತು. ಇದು ಕಾಂಗ್ರೆಸ್ ಹಾಗೂ ಕೆಲವು ಮಾಧ್ಯಮಗಳ ಷಡ್ಯಂತ್ರವಾಗಿದ್ದು, ವಿಶೇಷ ತನಿಖಾ ತಂಡವು ತಮಗೆ ಸಮನ್ಸ್ ಕಳುಹಿಸಿರಲಿಲ್ಲ ಎಂದು ಮೋದಿ ಸ್ಪಷ್ಟೀಕರಣ ನೀಡಿದ್ದರು.
ಮೋದಿ ಅವರು ಸುಪ್ರೀಂ ಕೋರ್ಟ್ ನೇಮಿಸಿದ ತನಿಖಾ ತಂಡದ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಗುಜರಾತ್ ಮುಖ್ಯಮಂತ್ರಿ, ಈ ತನಿಖಾ ಸಮಿತಿಯನ್ನು ದೇಶದ ಪರಮೋಚ್ಚ ನ್ಯಾಯಾಲಯವೇ ನೇಮಿಸಿದ್ದು, ಇದರಲ್ಲಿ ಗುಜರಾತಿನ ಯಾವುದೇ ಅಧಿಕಾರಿಗಳಿಲ್ಲ. ಎಲ್ಲ ತನಿಖೆಯೂ, ವಿಚಾರಣೆಯೂ ಸುಪ್ರೀಂ ಕೋರ್ಟಿನ ಮೂಲಕವೇ ನಡೆಯುತ್ತಿದೆ ಮತ್ತು ಇನ್ನಾದರೂ ಟೀಕಾಕಾರರು ಬಾಯಿ ಮುಚ್ಚಬಹುದೆಂದು ಆಶಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಅಹಮದಾಬಾದಿನ ಗುಲ್ಬರ್ಗ್ ಸೊಸೈಟಿಯಲ್ಲಿ 2002ರ ಫೆಬ್ರವರಿ 28ರಂದು ನಡೆದ ಗಲಭೆಯಲ್ಲಿ ಮೃತರಾಗಿದ್ದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ವಿಧವೆ ಜಕೀಯಾ ಜಾಫ್ರಿ ನೀಡಿದ ದೂರಿನಲ್ಲಿ ಮೋದಿ ಸಹಿತ 63 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಇದಲ್ಲದೆ ಗುಜರಾತ್ ಗಲಭೆಗೆ ಬೆಂಬಲ ನೀಡಿದ ಆರೋಪವೂ ಮೋದಿ ಮೇಲಿದೆ. ಈ ಸಂಬಂಧ ಶನಿವಾರ ವಿಚಾರಣೆ ನಡೆದಿತ್ತು. ಸುಪ್ರೀಂ ಕೋರ್ಟಿಗೆ ನೀಡಿದ ದೂರಿನಲ್ಲಿ ಜಕೀಯಾ ಜಾಫ್ರಿ, ಮೋದಿಯನ್ನು ಒಳಸಂಚುಕೋರರು ಎಂದು ಹೆಸರಿಸಿದ್ದರು.
ಈ ಮೊದಲು, ಆರ್.ಕೆ.ರಾಘವನ್ ನೇತೃತ್ವದ ಎಸ್ಐಟಿಯು, ವಿಚಾರಣೆಗೆ ಹಾಜರಾಗುವಂತೆ ಮೋದಿಗೆ ಸಮನ್ಸ್ ನೀಡಿತ್ತು. ಆದರೆ ಮಾರ್ಚ್ 21ರಿಂದ ಆರಂಭವಾಗಿ ಒಂದು ವಾರದೊಳಗೆ ಹಾಜರಾಗುವಂತೆ ಅದರಲ್ಲಿ ಸೂಚಿಸಲಾಗಿತ್ತು. ಈ ಬಗ್ಗೆ ಕಾಂಗ್ರೆಸ್ ಹುಯಿಲೆಬ್ಬಿಸಿ, ಮಾರ್ಚ್ 21ರಂದು ಮೋದಿ ತನಿಖಗೆ ಹಾಜರಾಗದೆ ನುಣುಚಿಕೊಂಡಿದ್ದಾರೆ ಎಂದು ಆರೋಪಿಸಿತ್ತು.