ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಲೈನ್ ಆಫ್ ಕಂಟ್ರೋಲ್(ಎಲ್‌ಓಸಿ) ನಲ್ಲಿ ಭಾರೀ ಶಸ್ತ್ರ ಸಜ್ಜಿತ ಐದು ಮಂದಿ ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿರುವುದಾಗಿ ರಕ್ಷಣಾ ಪಡೆ ವಕ್ತಾರ ಶನಿವಾರ ತಿಳಿಸಿದ್ದಾರೆ.
ಇಲ್ಲಿಂದ ಸುಮಾರು 140ಕಿ.ಮೀ. ದೂರದ ಕೇರನ್ ಸೆಕ್ಟರ್ ಪ್ರದೇಶದಲ್ಲಿ ಉಗ್ಗರು ಒಳನುಸುಳಲು ಯತ್ನಿಸಿದ್ದ ಸಂದರ್ಭದಲ್ಲಿ ಅವರನ್ನು ಹತ್ಯೆಗೈಯಲಾಗಿದೆ ಎಂದು ಲೆ.ಕರ್ನಲ್ ಜೆ.ಎಸ್.ಬ್ರಾರ್ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಉಗ್ರರು ಭಾರತದ ಗಡಿಯೊಳಗೆ ನುಸಳಲು ಈ ಉಗ್ರರ ಗುಂಪು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಮಿಲಿಟರಿ ಪಡೆಗಳು ಗುಂಡಿನ ದಾಳಿಯನ್ನು ನಡೆಸಿರುವುದಾಗಿ ವಿವರಿಸಿದ ಅವರು, ಸ್ಥಳದಲ್ಲಿಯೇ ಐದು ಮಂದಿ ಉಗ್ರರು ಸಾವನ್ನಪ್ಪಿರುವುದಾಗಿ ತಿಳಿಸಿದರು.
ಸಾವನ್ನಪ್ಪಿರುವ ಉಗ್ರರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದಾಗಿಯೂ ಹೇಳಿದರು. ಇದೇ ಸೆಕ್ಟರ್ ಪ್ರದೇಶದಲ್ಲಿ ಕಳೆದ ಎಂಟು ದಿನಗಳಿಂದ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಲೇ ಇತ್ತು.
ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ ನಡೆಸುವ ಉದ್ದೇಶದಿಂದ ಹಲವು ಉಗ್ರರು ಲೈನ್ ಆಫ್ ಕಂಟ್ರೋಲ್ ಮೂಲಕ ನುಸುಳುವ ಸಾಧ್ಯತೆ ಇರುವುದಾಗಿ ಗುಪ್ತಚರ ವರದಿ ಮುನ್ನೆಚ್ಚರಿಕೆ ನೀಡಿತ್ತು.