ಗೋಧ್ರೋತ್ತರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೊನೆಗೂ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿದ್ದು, ಇದೀಗ ವಿಚಾರಣೆಯ ನಂತರ ಮೋದಿ ವಿರುದ್ಧ ಎಫ್‌ಐಆರ್ ದಾಖಲಾಗುವ ಸಾಧ್ಯತೆಯ ಕೂಗು ಕೇಳಿ ಬರತೊಡಗಿದೆ.
2002ರಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಎಹ್‌ಸಾಸ್ ಜಾಫ್ರಿ ಅವರ ಹತ್ಯೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಫ್ರಿ ಪತ್ನಿ ಜಾಕಿಯಾ ಜಾಫ್ರಿ ನೀಡಿದ್ದ ದೂರು ಸ್ವೀಕರಿಸಿ, ಮೋದಿ ಅವರನ್ನು ಎಸ್‌ಐಟಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೂಚಿಸಿತ್ತು.
ಗಲಭೆ ವೇಳೆ ಮೋದಿ ಮತ್ತು ಅವರ ಅಧಿಕಾರಿಗಳು ಅಹಮದಾಬಾದ್‌ನ ಗುಲ್ಬರ್ಗ ಸೊಸೈಟಿಯಲ್ಲಿ ಜನರನ್ನು ಪ್ರಚೋದಿಸಿ ಕುಮ್ಮಕ್ಕು ನೀಡಿದ್ದು 69ಜನರ ಮಾರಣ ಹೋಮಕ್ಕೆ ಕಾರಣವಾಗಿತ್ತು ಎಂಬುದು ದೂರಿನ ವಿವರ. ಇದರಲ್ಲಿ ಜಾಫ್ರಿ ಕೂಡ ಬಲಿಯಾಗಿದ್ದರು.
ವಿಶೇಷ ತನಿಖಾ ತಂಡ ಶನಿವಾರ ಮುಖ್ಯಮಂತ್ರಿ ಮೋದಿ ಅವರನ್ನು ಸುದೀರ್ಘವಾಗಿ 9ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. 68ಪ್ರಶ್ನೆಗಳನ್ನು ಕೇಳಿ, ವಿವರಣೆ ಪಡೆದಿತ್ತು. ಆ ನಿಟ್ಟಿನಲ್ಲಿ ಎಸ್‌ಐಟಿ ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸಲು ತಮ್ಮ ವರದಿಯಲ್ಲಿ ಶಿಫಾರಸು ಮಾಡುವ ಸಾಧ್ಯತೆ ಇದೆ ಎಂಬುದು ಕಾನೂನು ತಜ್ಞರ ಅಭಿಮತವಾಗಿದೆ.
ಪ್ರಕರಣದ ಕುರಿತಂತೆ ಮೋದಿ ಅವರ ಹೇಳಿಕೆಯನ್ನು ಕ್ರಿಮಿನಲ್ ಪ್ರೊಸಿಜರ್ ಕೋಡ್ 161ರ ಅಡಿಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಇದರಿಂದಾಗಿ ಘಟನೆಯಲ್ಲಿ ಭಾಗಿಯಾದ ಆರೋಪಿಗಳ ಬಂಧನವಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆದರೆ ವಿಚಾರಣೆ ನಂತರ ಎಸ್‌ಐಟಿ ನೇರವಾಗಿ ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸುವ ಅಧಿಕಾರ ಇಲ್ಲ. ಇದಕ್ಕೆ ರಾಜ್ಯಪಾಲರ ಅನುಮತಿ ಪಡೆದು ಆರೋಪಪಟ್ಟಿ ಸಲ್ಲಿಸಬಹುದಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ವಿವರಿಸಿದೆ.
ಇದು ರಾಜಕೀಯ ಗೆಲುವು-ಬಿಜೆಪಿ: ಪ್ರಕರಣದ ವಿಚಾರಣೆಗೆ ಹಾಜರಾಗುವ ಮೂಲಕ ನನ್ನ ಟೀಕಾಕಾರರಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ ಎಂದು ಮೋದಿ ಪ್ರತಿಕ್ರಿಯೆ ನೀಡಿದ್ದರೆ, ಇದೊಂದು ರಾಜಕೀಯ ಜಯ, ಮೋದಿ ಅವರು ರಾಷ್ಟ್ರದ ಕಾನೂನಿಗೆ ಕೊಟ್ಟಿರುವ ಅತ್ಯುನ್ನತ ಗೌರವ ನೀಡಿರುವುದು ಇದರಿಂದ ಸಾಬೀತಾಗಿದೆ ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ತಿಳಿಸಿದ್ದಾರೆ.
ಕಾಂಗ್ರೆಸ್ ವಾಗ್ದಾಳಿ: ಸಂವಿಧಾನದ ಉನ್ನತ ಹುದ್ದೆಯಲ್ಲಿದ್ದ ರಾಜ್ಯದ ಮುಖ್ಯಮಂತ್ರಿಯೊಬ್ಬರು ಸಾಮೂಹಿಕ ಹತ್ಯಾ ಪ್ರಕರಣದ ವಿಚಾರಣೆಗಾಗಿ ಸಮನ್ಸ್ ಪಡೆದು, ವಿಚಾರಣೆಗೆ ಹಾಜರಾದ ಉದಾಹರಣೆ ದೇಶದ ರಾಜಕೀಯ ಚರಿತ್ರೆಯಲ್ಲೇ ಇಲ್ಲ, ಮೋದಿಯೇ ಪ್ರಥಮ ವ್ಯಕ್ತಿಯಾಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ವಾಗ್ದಾಳಿ ನಡೆಸಿದ್ದಾರೆ.
ನನಗೆ ನ್ಯಾಯ ಸಿಗುತ್ತೆ-ಜಾಕಿಯಾ: ನರೇಂದ್ರ ಮೋದಿ ವಿರುದ್ಧ ದೂರು ನೀಡಿ, ಎಸ್‌ಐಟಿ ಮುಂದೆ ಹಾಜರಾಗಲು ಕಾರಣರಾದ ಜಾಕಿಯಾ ಜಾಫ್ರಿ, ಮೋದಿ ವಿಚಾರಣೆಗೆ ಹಾಜರಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ನನಗೆ ನ್ಯಾಯ ಸಿಗದಷ್ಟು ಈ ದೇಶದ ಕಾನೂನು ಕುರುಡಾಗಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ನಿಜಕ್ಕೂ ನನಗೆ ನ್ಯಾಯ ಸಿಕ್ಕೇ ಸಿಗುತ್ತೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.