ತಮ್ಮ ಸಶಸ್ತ್ರ ಹೋರಾಟಕ್ಕೆ ಯುವಕರನ್ನು ಸೆಳೆಯಲು ಮಾವೋವಾದಿ ನಕ್ಸಲೀಯರು ವೇತನ ನೀಡುವ ಆಮಿಷ ಒಡ್ಡುತ್ತಿರುವುದಲ್ಲದೆ, ಸುಲಿಗೆ ಹಣದಲ್ಲೂ ಒಂದು ಭಾಗವನ್ನು ಕೊಡುಗೆಯಾಗಿ ನೀಡುತ್ತಿದ್ದಾರಂತೆ!.
ಸಂಘಟನೆಯ ಕಾರ್ಯಕರ್ತರಿಗೆ ಹಣಕಾಸು ಉತ್ತೇಜನ ನೀಡುವ ಮಾವೋವಾದಿಗಳ ತಂತ್ರ ಫಲ ನೀಡಿದೆ. ನಕ್ಸಲ್ ಪೀಡಿತ ರಾಜ್ಯಗಳ ಹಿಂದುಳಿದ ಪ್ರದೇಶಗಳ ನಿರುದ್ಯೋಗಿ ಯುವಕರು ಹೆಚ್ಚು, ಹೆಚ್ಚಾಗಿ ಈ ಆಂದೋಲನಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೊಂದು ಆತಂಕದ ವಿಷಯವಾಗಿದ್ದು, ನಕ್ಸಲೀಯರು 3ಸಾವಿರ ರೂಪಾಯಿ ವೇತನ ನೀಡುವುದಲ್ಲದೆ, ಅವರು ಸುಲಿಗೆ ಮಾಡುವ ಹಣದಲ್ಲೂ ಒಂದು ಪಾಲನ್ನು ನೀಡುತ್ತಿದ್ದಾರೆಂದು ಗೃಹಸಚಿವಾಲಯದ ಅಧಿಕಾರಿ ವಿವರಿಸಿದ್ದಾರೆ.
ನಕ್ಸಲ್ ಬಂಡುಕೋರರು ವರ್ಷಕ್ಕೆ ಸುಮಾರು 1,400ಕೋಟಿ ರೂ.ಹಣವನ್ನು ನೂರಾರು ಉದ್ಯಮಿಗಳು ನೆಲೆಗೊಂಡಿರುವ ಖನಿಜ ಸಮೃದ್ಧ ಪ್ರದೇಶಗಳ ಮಾಲೀಕರಿಂದ ಸುಲಿಗೆ ಮಾಡುತ್ತಿದ್ದಾರೆ. ದಾಳಿಯ ಭಯದಿಂದಾಗಿ ಅನೇಕ ಕೈಗಾರಿಕಾ ಉದ್ಯಮಿಗಳು, ವರ್ತಕರು, ಗುತ್ತಿಗೆದಾರರು ಮತ್ತು ಸರ್ಕಾರಿ ಅಧಿಕಾರಿಗಳೂ ಕೂಡ ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ನಕ್ಸಲೀಯರಿಗೆ ಸುಲಿಗೆ ಹಣವನ್ನು ನೀಡುತ್ತಿದ್ದಾರೆ.