ಮುಂಬೈಯಲ್ಲಿನ ಸರಕಾರಿ ಕಾರ್ಯಕ್ರಮದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಉಪಸ್ಥಿತಿಯನ್ನು ವಿರೋಧಿಸಿದ್ದವರು 'ಅಸ್ಪ್ರಶ್ಯತೆಯ ತಾಲಿಬಾನ್‌ಗಳು' ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಎಲ್ಲೆಡೆಗಳಿಂದ ಸಾಕಷ್ಟು ಟೀಕೆಗಳು ಬರುತ್ತಿರುವ ಹೊರತಾಗಿಯೂ ಗುಜರಾತನ್ನು ನೆಚ್ಚಿನ ಆಯ್ಕೆಯನ್ನಾಗಿ ಮಾಡಿಕೊಂಡಿರುವ ಬಚ್ಚನ್ ಅವರು ದೈನ್ಯತೆಯನ್ನು ಮೈಗೂಡಿಸಿಕೊಂಡಿರುವ ಶ್ರೇಷ್ಠ ಕಲಾವಿದ ಎಂದು 67ರ ಹರೆಯದ ಬಾಲಿವುಡ್ ಶ್ರೇಷ್ಠನನ್ನು ಶ್ಲಾಘಿಸಿರುವ ಮೋದಿ, ಇದು ಸ್ಫೂರ್ತಿದಾಯಕ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ ಭಾಗವಹಿಸುವ ಮುಂಬೈಯಲ್ಲಿನ ಸರಕಾರಿ ಕಾರ್ಯಕ್ರಮವೊಂದರಲ್ಲಿ ಬಚ್ಚನ್ ಭಾಗವಹಿಸಲಿರುವ ವಿಚಾರ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ಆಡಳಿತವಿರುವ ಗುಜರಾತ್‌ಗೆ ರಾಯಭಾರಿಯಾಗಿರುವ ನಟನ ಜತೆ ವೇದಿಕೆ ಹಂಚಿಕೊಳ್ಳುವುದಕ್ಕೆ ಕಾಂಗ್ರೆಸ್‌ನ ಒಂದು ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಅಲ್ಲದೆ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಭಾಗವಹಿಸಿದ್ದ ಶನಿವಾರದ ದೆಹಲಿಯಲ್ಲಿನ ಡಬ್ಲ್ಯೂಡಬ್ಲ್ಯೂಎಫ್‍ನ ಅರ್ತ್ ಆರ್ ಕಾರ್ಯಕ್ರಮದ ಸ್ಥಳದಲ್ಲಿ ತನ್ನ ಪುತ್ರ ಅಭಿಷೇಕ್ ಬಚ್ಚನ್ ಭಿತ್ತಿ ಪತ್ರಗಳನ್ನು ಹರಿದು ಹಾಕಲಾಗಿದೆ ಎಂದು ಬಚ್ಚನ್ ತನ್ನ ಬ್ಲಾಗಿನಲ್ಲಿ ಆರೋಪಿಸುವ ಮೂಲಕ ಬಚ್ಚನ್-ಕಾಂಗ್ರೆಸ್ ವಿವಾದ ಮತ್ತೊಂದು ಮಗ್ಗುಲನ್ನು ಪಡೆದುಕೊಂಡಿದ್ದು, ಇದರ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಬಿಗ್‌ಬಿ ಸಂಶಯ ವ್ಯಕ್ತಪಡಿಸಿದ್ದಾರೆ.
ವಿರೋಧದ ಹಿಂದೆ ಗುಜರಾತ್ ವಿರೋಧಿ ಯೋಜನೆಗಳಿದ್ದು, ಸೀನಿಯರ್ ಬಚ್ಚನ್ ಅವರ ವಿವಾದದಿಂದ ಇದು ಹಾಡುಹಗಲೇ ಬಯಲಾಗಿದೆ ಎಂದು ಮೋದಿ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಕುಟುಕಿದ್ದಾರೆ.
ಈ 'ಅಸ್ಪಶ್ಯತೆಯ ತಾಲಿಬಾನ್‌ಗಳು' ಗುಜರಾತ್ ವಿರೋಧಿ ನಿಲುವನ್ನು ಬೆನ್ನತ್ತುವ ಭರದಲ್ಲಿ ತಮ್ಮೆಲ್ಲಾ ಸಂವೇದನೆಯನ್ನೇ ಕಳೆದುಕೊಂಡಿದ್ದಾರೆ ಎಂದೂ ಅವರು ಎದುರಾಳಿಗಳು ಅನುಸರಿಸುತ್ತಿರುವ ಸಿದ್ಧಾಂತಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು ಉಪ್ಪನ್ನು ತಿನ್ನಬೇಡಿ ಎಂದು ಮುಂದಿನ ದಿನಗಳಲ್ಲಿ ಅವರು ಹೇಳಿದರೆ ಅಚ್ಚರಿಯಿಲ್ಲ. ಅಮೂಲ್ ಬೆಣ್ಣೆ ಮತ್ತು ಹಾಲಿನ ಬಳಕೆಯ ಮೇಲೆ ನಿಷೇಧ ಹೇರಬಹುದು. ಅಷ್ಟೇ ಯಾಕೆ ಯುವ ಜನತೆ ಡೆನಿಮ್ ಜೀನ್ಸ್ ತೊಡಬಾರದು ಎಂದು ಆದೇಶ ನೀಡಬಹುದು. ಯಾಕೆ ಗೊತ್ತೇ? ಇವೆಲ್ಲಾ ಉತ್ಪನ್ನಗಳು ಗುಜರಾತಿನಲ್ಲೇ ತಯಾರಾಗುತ್ತಿವೆ ಎಂದು ಮೋದಿ ವ್ಯಂಗ್ಯವಾಡಿದ್ದಾರೆ.
ಗುಜರಾತ್ ಅಭಿವೃದ್ಧಿ ಮತ್ತು ದೇಶದ ಅಭಿವೃದ್ಧಿಯನ್ನು ಎದುರಾಳಿಗಳು ವಿರೋಧಿಸುತ್ತಿದ್ದಾರೆ ಎಂದಿರುವ ಮೋದಿ, 'ತಮ್ಮಿಂದ ರಾಷ್ಟ್ರಕ್ಕೆ ಮತ್ತು ನಮ್ಮ ಸಮಾಜಕ್ಕೆ ಧಕ್ಕೆಯಾಗುತ್ತಿದೆ ಎಂಬುದರ ಅರಿವು ಈ ತಾಲಿಬಾನ್‌ಗಳಿಗೆ ಇಲ್ಲ ಎಂಬುದನ್ನು ನಂಬಲು ನನಗೆ ಸಾಧ್ಯವಾಗುತ್ತಿಲ್ಲ' ಎಂದು ತಿಳಿಸಿದ್ದಾರೆ.