ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶೇ.30 ಮುಸ್ಲಿಮರ ತಿಂಗಳ ಸಂಪಾದನೆ 550 ರೂಪಾಯಿ! (Muslims | poverty line | NCAER survey | Dalits)
Bookmark and Share Feedback Print
 
ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಬೇಕೆಂಬ ವಾದ ಕೇಳಿ ಬರುತ್ತಿರುವ ನಡುವೆಯೇ ಸಮೀಕ್ಷೆಯೊಂದು ದೇಶದ ಮುಸ್ಲಿಂ ಜನಾಂಗದ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದು, ಮೂರನೇ ಒಂದು ಭಾಗದಷ್ಟು ಮುಸ್ಲಿಮರ ತಿಂಗಳ ಸಂಪಾದನೆ ಕೇವಲ 550 ರೂಪಾಯಿಗಳು ಎಂದು ಬಹಿರಂಗಪಡಿಸಿದೆ.

ಆರ್ಥಿಕ ಸಂಶೋಧನೆಯ ರಾಷ್ಟ್ರೀಯ ಸಮಿತಿ (ಎನ್‌ಸಿಎಇಆರ್) ನಡೆಸಿರುವ ಈ ಸಮೀಕ್ಷೆಯ ಪ್ರಕಾರ 10 ಮುಸ್ಲಿಮರಲ್ಲಿ ಮೂವರು ಬಡತನ ರೇಖೆಗಿಂತ ಕೆಳಗೆ ಮತ್ತು ತಿಂಗಳಿಗೆ 550 ರೂಪಾಯಿಗಳಿಗಿಂತಲೂ ಕಡಿಮೆ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂದು 2004-05ರ ಅಂಕಿ-ಅಂಶಗಳನ್ನು ಆಧರಿಸಿ ವಿವರಣೆ ನೀಡಿದೆ.

ಈ ಜನಾಂಗದ ಬಡವರಲ್ಲಿ ಹಳ್ಳಿಗರಿಗಿಂತ ನಗರ ಪ್ರದೇಶಗಳ ಮುಸ್ಲಿಮರು ಕೊಂಚ ವಾಸಿ. ಹಳ್ಳಿಗಳಲ್ಲಿನ ಮುಸ್ಲಿಮರ ಸರಾಸರಿ ತಿಂಗಳ ಆದಾಯ ಕೇವಲ 338 ರೂಪಾಯಿಗಳು ಎಂದು ಸಮೀಕ್ಷೆ ನಡೆಸಿದ ವರ್ಷವನ್ನು ಆಧರಿಸಿ ಎನ್‌ಸಿಎಇಆರ್ ಕಳೆದ ವಾರ ತಿಳಿಸಿದೆ.

ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರಿಗೆ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಬೇಕೆಂದು ಇತ್ತೀಚೆಗಷ್ಟೇ ರಂಗನಾಥ್ ಮಿಶ್ರಾ ಆಯೋಗವು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು. ಅಲ್ಲದೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ದಲಿತರಿಗೂ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬೇಕೆಂದು ಇದು ಹೇಳಿತ್ತು. ಈ ಕುರಿತು ಸರಕಾರ ಇನ್ನಷ್ಟೇ ತನ್ನ ನಿಲುವನ್ನು ಪ್ರಕಟಿಸಬೇಕಿದೆ.

ಶೇ.50ಕ್ಕಿಂತಲೂ ಹೆಚ್ಚು ಮಂದಿ ಬಡತನ ರೇಖೆಗಿಂತ ಕೆಳಗಿರುವ ಆದಿವಾಸಿ ಜನಾಂಗ ತೀರಾ ದುರ್ಬಲವೆಂದು ಸಮೀಕ್ಷೆಯಲ್ಲಿ ಕಂಡು ಬಂದಿದ್ದು, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ದಲಿತರು (ಶೇ.32) ಮತ್ತು ಮುಸ್ಲಿಮರಿದ್ದಾರೆ (ಶೇ.31) ಎಂದು ಎನ್‌ಸಿಎಇಆರ್ ಮತ್ತು ಅಮೆರಿಕಾದ ಮೇರಿಲೆಂಡ್ ವಿಶ್ವವಿದ್ಯಾಲಯ ನಡೆಸಿರುವ 'ಭಾರತೀಯ ಮಾನವಾಭಿವೃದ್ಧಿ' ಸಮೀಕ್ಷೆ ತಿಳಿಸಿದೆ.

2001ರ ಜನಗಣತಿ ಪ್ರಕಾರ ಭಾರತದಲ್ಲಿ ಒಟ್ಟು 13.8 ಕೋಟಿ ಮುಸ್ಲಿಮರಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಈ ಜನಾಂಗದ ಪಾಲು ಶೇ.13.4 ಎಂದು ಸರಕಾರ ಹೇಳಿತ್ತು.

ಆದಿವಾಸಿ ಮತ್ತು ದಲಿತ ಕುಟುಂಬದ ವಾರ್ಷಿಕ ಆದಾಯ ಕ್ರಮವಾಗಿ 20,000 ಮತ್ತು 22,800 ರೂಪಾಯಿಗಳು. ಇದೇ ಅತೀ ಕಡಿಮೆ ಸಂಪಾದನೆ. ನಂತರದ ಸ್ಥಾನಗಳಲ್ಲಿ ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಮುಸ್ಲಿಂ ಕುಟುಂಬ ಕಾಣಿಸಿಕೊಂಡಿದ್ದು ಕ್ರಮವಾಗಿ 26,091 ಮತ್ತು 28.500 ರೂಪಾಯಿಗಳು ಎಂದು ಸಮೀಕ್ಷಾ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ